ಹಳಿಯಾಳ: ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಹಳಿಯಾಳ – ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಈ ಬಗ್ಗೆ ಶನಿವಾರ ದೂರವಾಣಿಯ ಮೂಲಕ ಮಾಧ್ಯಮದ ಜೊತೆ ಮಾತನಾಡಿದ ಆರ್.ವಿ.ದೇಶಪಾಂಡೆ ರೈತರು ಈ ದೇಶದ ಬೆನ್ನೆಲುಬು. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಆದ್ಯ ಕರ್ತವ್ಯ. ಪ್ರಕೃತಿ ವಿಕೋಪ ಬರಗಾಲ ಮೊದಲಾದ ಸಮಸ್ಯೆಗಳಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಸಹಕಾರಿ ಸಂಘಗಳಲ್ಲಿ ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿರುವುದು ಉತ್ತಮವಾದ ಕಾರ್ಯವಾಗಿದೆ. ಸಹಕಾರಿ ಸಂಘಗಳಿಂದ ರೈತರು ಪಡೆದ ಸಾಲದ ಅಸಲನ್ನು ಸಕಾಲದಲ್ಲಿ ಪಾವತಿಸಿದವರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದರು.