ಕುಮಟಾ: ವಿಧಾತ್ರಿ ಅಕಾಡೆಮಿ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣ ಜಿಲ್ಲೆಯ ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಹಾಗೂ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿವರ್ಷದಂತೆ ಈ ವರ್ಷವು ಸಹ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಸ್ಥೆಯ ಹೆಸರನ್ನು ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡಿದ್ದಾರೆ.
2023-24 ನೇ ಸಾಲಿನ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಸಾಂಸ್ಕೃತಿಕ ಹಾಗೂ ಸಹಪಠ್ಯ ಚಟುವಟಿಕೆಗಳ ದ್ವಿತೀಯ ಪಿಯುಸಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಕು. ಸೊನಾಲಿ ಶೇಟ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಪ್ರಶಸ್ತಿ ಸಹಿತ ನಗದು ಬಹುಮಾನ ಪಡೆದಿರುತ್ತಾಳೆ. ಹಾಗೆಯೇ ಪ್ರಥಮ ಪಿಯುಸಿ ವಿಭಾಗದ ಜಾನಪದ ಗೀತೆಯಲ್ಲಿ ಕು. ಗಿರೀಶ್ ಶಾನಭಾಗ ದ್ವಿತೀಯ ಸ್ಥಾನ ಪ್ರಶಸ್ತಿ ಸಹಿತ ನಗದು ಬಹುಮಾನ ಪಡೆದಿದ್ದಾನೆ. ಅನನ್ಯ ಭಾಗ್ವತ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ವಾಗ್ಮಿ ಎಂಬುದನ್ನು ಸಾಧರಪಡಿಸಿದ್ದಾಳೆ. ಕಳೆದ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯಂತ ಹೆಚ್ಚಿನ ಪ್ರಶಸ್ತಿ ಗಳಿಸಿದ ಏಕೈಕ ಕಾಲೇಜಾಗಿ ಹೊರಹೊಮ್ಮಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಗುರುರಾಜ ಶೆಟ್ಟಿ, ಫರ್ಜಾನಾ ಶೇಖ್, ದೀಕ್ಷಿತಾ ಕುಮಟೆಕರ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.