ಕಾರವಾರ: ವಿಜಯ ದಿವಸ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜಯ ದಿವಸ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ವಿಜಯ ದಿವಸ ಆಚರಣೆಯನ್ನು ಡಿ. 16 ರಂದು ರವೀಂದ್ರನಾಥ್ ಟಾಗೋರ್ ಕಡಲತೀರದ ಯುದ್ದ ನೌಕಾ ವಸ್ತು ಸಂಗ್ರಹಾಲಯದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಶಿಷ್ಟಾಚಾರದ ಅನ್ವಯ ಕಾರ್ಯಕ್ರಮ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. 1971 ರಲ್ಲಿ ನಡೆದ ಯುದ್ದದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದವು. ದೇಶದ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಶೌರ್ಯ, ಬಲಿದಾನದ ಬಗ್ಗೆ ರಕ್ಷಣಾ ಕ್ಷೇತ್ರದಲ್ಲಿರುವ ಅಧಿಕಾರಿಗಳಿಂದ ಯವ ಜನತೆಗೆ ಸ್ಪೂರ್ತಿದಾಯಕ ಉಪನ್ಯಾಸ ನೀಡಲು ಕ್ರಮ ಕೈಗೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಯುದ್ದ ನೌಕಾ ವಸ್ತು ಸಂಗ್ರಾಲಯದಲ್ಲಿರುವ ಪರಮವೀರ ಚಕ್ರ ಮೇಜರ್ ರಾಮ ರಘೋಬಾ ರಾಣೆ ಅವರ ಪ್ರತಿಮೆಗೆ ಪುಷ್ಪಾರ್ಚನೆ, ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಅವಲಂಬಿತರಿಗೆ ಸನ್ಮಾನ, 2023ರ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುವುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಕ್ಯಾಪ್ಟನ್ ರಮೇಶ ರಾವ್ ಮಾಹಿತಿ ನೀಡಿದರು.
ಸಭೆಯಲ್ಲಿ ಐಎನ್ಎಸ್ ಕದಂಬ ನೌಕಾನೆಲೆಯ ಕಮಾಂಡರ್ ದೀಪಕ ಧಾನಕರ, ನಾಗೇಶ ಜೆಲೆ, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ಎಸ್.ಎಫ್ ಗಾಂವಕರ, ತಹಶೀಲ್ದಾರ ನಿಶ್ಚಲ್ ನರೋನಾ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ.ಎಮ್., ಪೊಲೀಸ್ ಇನ್ಸ್ಪೆಕ್ಟರ್ ಆನಂದಮೂರ್ತಿ ಸಿ, ಇತರರು ಇದ್ದರು.