Slide
Slide
Slide
previous arrow
next arrow

ಕ್ಯಾನ್ಸರ್ ಕುರಿತು ಜನ ಜಾಗೃತಿ ಕಾರ್ಯಾಗಾರ

300x250 AD

ಅಂಕೋಲಾ: ಲಯನ್ಸ್ ಕ್ಲಬ್ ಆಪ್ ಅಂಕೋಲಾ ಕರಾವಳಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಅಂಕೋಲಾ, ಕೆ.ಎಸ್. ಹೆಗಡೆ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತರಿಗೆ ಮಕ್ಕಳ ಕ್ಯಾನ್ಸರ್ ಕುರಿತು ಜನ ಜಾಗೃತಿ ಹಾಗೂ ಆಯುಷ್ಮಾನ ಭಾರತ ಕುರಿತು ಮಾಹಿತಿ ಒದಗಿಸುವ ಕಾರ್ಯಾಗಾರ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಆರೋಗ್ಯದ ಕುರಿತು ಸರ್ಕಾರದಿಂದ ಹಲವಾರು ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ ಸೇವಾ ಮನೋಭಾವದ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಸಾಧ್ಯ ಎಂದರು.
ದಂತ ವೈದ್ಯ ಡಾ.ಕರುಣಾಕರ ನಾಯ್ಕ ಮಾತನಾಡಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಲಯನ್ಸ್ ಕ್ಲಬ್ ನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಕ್ಯಾನ್ಸರ್ ವ್ಯಾಪಕ ಪ್ರಮಾಣದಲ್ಲಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.
ಆಶಾ ಕಾರ್ಯಕರ್ತರು ಆರೋಗ್ಯ ಜಾಗೃತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ಅವರಿಗೆ ಮಾಹಿತಿ ನೀಡಿದರೆ ಅದು ಪ್ರತಿ ಮನೆ ಬಾಗಿಲಿಗೆ ತಲುಪುತ್ತದೆ ಎಂದರು.
ಕ್ಯಾನ್ಸರ್ ಕುರಿತು ಮಾಹಿತಿ ನೀಡಿದ ಮಂಗಳೂರು ಕೆ.ಎಸ್. ಹೆಗಡೆ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯ ಡಾ.ವಿನಯಕುಮಾರ ರಾಜೇಂದ್ರ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ, ಹದಿ ಹರೆಯದವರಲ್ಲಿ ಸಹ ಕ್ಯಾನ್ಸರ್ ವ್ಯಾಪಕ ಪ್ರಮಾಣದಲ್ಲಿ ಕಂಡು ಬರುತ್ತಿದ್ದು ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗಿಗಳನ್ನು ಉಳಿಸಬಹುದಾಗಿದೆ ಎಂದರು.
ಆರೋಗ್ಯ ಮಿತ್ರ ದೇವರಾಜ ಅವರು ಆಯುಷ್ಮಾನ ಭಾರತ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಕುರಿತು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಆಪ್ ಅಂಕೋಲಾ ಕರಾವಳಿಯ ಅಧ್ಯಕ್ಷ ಮಂಜುನಾಥ ಹರಿಕಂತ್ರ ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಕ್ಲಬ್ ಪದಾಧಿಕಾರಿ ಎಸ್. ಆರ್. ಉಡುಪಿ,ಮಹಾಂತೇಶ ರೇವಡಿ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top