ಕಾರವಾರ: ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲವಾದಲ್ಲಿ ಕರವೇಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ಮಾರ್ಗದ ಕೋಳಿಕೇರಿ, ಹಳಿಯಾಳ ಕ್ರಾಸ್, ಆರತಿಬೈಲ್, ಅರಬೈಲ್ ಘಟ್ಟ ಪ್ರದೇಶ, ಗುಳ್ಳಾಪುರ, ರಾಮನಗುಳಿ, ಸುಂಕಸಾಳ, ಹೆಬ್ಬುಳ, ಬಾಳೆಗುಳಿ ಸೇರಿದಂತೆ ಅಂಕೋಲಾದವರೆಗೂ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದೆ. ದೊಡ್ಡ ದೊಡ್ಡ ಹೊಂಡಗಳು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಅದರಲ್ಲೂ, ಸಣ್ಣ ವಾಹನಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಕೊರಕಲು ಬಿದ್ದ ಅರಬೈಲ್ ಘಟ್ಟದಂತಹ ಇಳಿಜಾರಿನ ಅಪಾಯಕಾರಿ ತಿರುವುಗಳಲ್ಲಿ ಸರಕು ತುಂಬಿದ ಲಾರಿಗಳು, ಭಾರಿ ಗಾತ್ರದ ವಾಹನಗಳು ಮುಗ್ಗರಿಸಿ ಬೀಳುತ್ತಿವೆ. ಹೆದ್ದಾರಿ ಹೊಂಡದಲ್ಲಿ, ಸಣ್ಣಪುಟ್ಟ ವಾಹನಗಳು ಸರ್ಕಸ್ ಮಾಡುತ್ತ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ರಸ್ತೆಯಲ್ಲಿ ನಡೆಯುವ ಅವಘಡಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು.
ಶೀಘ್ರದಲ್ಲೇ ಎನ್‌ಎಚ್‌ಎಐ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಕರವೇ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.