ಕುಮಟಾ: ಯಕ್ಷಗಾನ ಮೂಲತಃ ಆರಾಧನಾ ಕಲೆ, ಪೂಜಾ ಮನೋಭಾವನೆಯಿಂದ ಪ್ರಾರಂಭವಾದ ಈ ಕೂಟಕಲೆ ಬೇರೆ ಬೇರೆ ಸ್ವರೂಪವನ್ನು ಪಡೆದು ಇಂದು ಈ ಶ್ರೇಷ್ಠ ಸ್ಥಾನವನ್ನು ಪಡೆದಿದೆ. ಎಂಥವರನ್ನೂ ಸೆಳೆಯಬಲ್ಲ ಈ ಕಲೆ ಅಭಿನಯ ಪ್ರಧಾನವಾಗಿ, ಸಿದ್ಧ ಸಾಹಿತ್ಯಕ್ಕೆ ಅಭಿನಯಿಸಿ, ವ್ಯಾಖ್ಯಾನ ಮಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿ ಇಡೀ ಭಾರತ ಪರಂಪರೆಯ ಋಷಿ ಮುನಿಗಳ ಜೀವನ ಸಂದೇಶವನ್ನು ಜನಕ್ಕೆ ತಲುಪಿಸುವ ಮಾಧ್ಯಮವಾಗಿ, ಜೀವನದ ತತ್ವಗಳನ್ನು ಜಗತ್ತಿಗೆ ಭೋಧಿಸುತ್ತಿರುವ ಶ್ರೇಷ್ಠ ಕಲೆಯಾಗಿ ಬೆಳೆದಿದೆ ಎಂದು ಖ್ಯಾತ ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಭಿಪ್ರಾಯಪಟ್ಟರು.
ಮೂರೂರು ಪ್ರಗತಿ ವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡ ಯಕ್ಷಗಾನ ಶಾಲೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಯಕ್ಷಗಾನ ವಿಶ್ವವಿದ್ಯಾಲಯವಿದ್ದಂತೆ. ಇದೊಂದು ವಿಶ್ವಕೋಶ. ಇದು ಜೀವನದ ಮೌಲ್ಯಗಳ ಸಂದೇಶವನ್ನು ಸಾರುತ್ತದೆ. ಬದಲಾವಣೆ ಜಗತ್ತಿನ ಸಹಜ ನಿಯಮ. ಯಕ್ಷಗಾನ ರಂಗದಲ್ಲಿಯೂ ಬದಲಾವಣೆ ಅಪೇಕ್ಷಣೀಯ. ಆದರೆ ಹದ ಬಿಡದೆ, ಔಚಿತ್ಯ ಮೀರದೆ ಈ ಕಲೆ ಬೆಳೆಯಲಿ. ಕಲಾಗ್ರಾಮ ಮೂರೂರಿನಲ್ಲಿ ಯಕ್ಷಗಾನ ಶಾಲೆ ತೆರೆದು ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಈ ಶಾಲೆ ಪ್ರಾರಂಭಿಸಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಆರ್.ನಾಯಕ ಮಾತನಾಡಿ, ಯಕ್ಷಗಾನ ನಮ್ಮಲ್ಲಿರುವ ನೈತಿಕತೆಯನ್ನು ಜಾಗೃತಗೊಳಿಸುತ್ತದೆ. ಉದಾತ್ತವಾದ ಆದರ್ಶವನ್ನು ಬೆಳೆಸುತ್ತದೆ. ಕಲೆ ಮತ್ತು ಕಲಾವಿದನಿಲ್ಲದ ಊರು ಹೆಸರಿಗಷ್ಟೇ ಊರಾಗಿರುತ್ತದೆ. ಹಾಗಾಗಿ ಶ್ರೇಷ್ಠವಾದ ಕಲೆಯನ್ನು ಒಪ್ಪಿಕೊಳ್ಳುವಂತೆ ಕರೆ ನೀಡಿದರು.
ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಕೊಣಾರೆ ಮಾತನಾಡಿ, ಯಕ್ಷಗಾನ ಇದು ನಮ್ಮೆಲ್ಲರ ಸಾಂಸ್ಕೃತಿಕ ವೈಭವ. ಅಂತಹ ಕಲೆಯನ್ನು ಆರಾದಿಸುವ ಮೂಲಕ ನಾವೆಲ್ಲ ಸಂಸ್ಕಾರವಂತರಾಗೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಜಿ.ಭಟ್ಟ, ಈ ಭಾಗದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ತಾವೆಲ್ಲ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿ, ಯಕ್ಷಗಾನ ಶಾಲೆಯ ರೂಪುರೇಷೆಯ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಭಾರತಿ ಕಲಾ ಕೇಂದ್ರದ ಸಂಚಾಲಕ ಡಿ.ಸಿ.ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರು, ಪ್ರಾಚಾರ್ಯರು, ಮುಖ್ಯಾಧ್ಯಾಪಕರು, ಪಾಲಕರು, ಊರ ನಾಗರಿಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿ.ವಿ.ಹೆಗಡೆ ಸ್ವಾಗತಿಸಿದರು. ಗಾಯಿತ್ರಿ ಹೆಬ್ಬಾರ ವಂದಿಸಿದರು. ಲೊಕೇಶ ಹೆಗಡೆ ಹಾಗೂ ಜಿ.ಆರ್. ನಾಯ್ಕ ನಿರೂಪಿಸಿದರು.