Slide
Slide
Slide
previous arrow
next arrow

ಡಿ. 7 ರಂದು ಸುವರ್ಣಸೌಧದ ಮುಂಭಾಗದಲ್ಲಿ ಧರಣಿ, ಮನವಿ ಸಲ್ಲಿಕೆ: ಅನಂತಮೂರ್ತಿ ಹೆಗಡೆ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಡಿ. 7 ರಂದು ಗುರುವಾರ ಬೆಳಗಾವಿಯ ಸುವರ್ಣಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.

ನಗರದ ತಹಸೀಲ್ದಾರ ಕಚೇರಿ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹದಲ್ಲಿ ಶನಿವಾರ ಭಾಗವಹಿಸಿ, ಅವರು ಮಾತನಾಡಿದರು. ಈ ಮೊದಲು ಅಧೀವೇಶನ ನಡೆಯುವ ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಡಿ.4ರಂದು ಧರಣಿ ಸತ್ಯಾಗ್ರಹ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು. ಆದರೆ ತಾಂತ್ರಿಕ ಕಾರಣಗಳಿಂದ ಡಿ.7 ರಂದು ಗುರುವಾರ ಧರಣಿ ಸತ್ಯಾಗ್ರಹ ನಡೆಸಲು ಬೆಳಗಾವಿಯ ಪೋಲೀಸ್ ಆಯುಕ್ತರ ಪರವಾನಿಗೆ ಲಭ್ಯವಾಗಿದ್ದು, ಅಂದು ಧರಣಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಅಧಿವೇಶನ ನಡೆಯಲಿರುವ ಸುವರ್ಣಸೌಧದಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಡಿ. 7 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 4 ಘಂಟೆಯವರೆಗೆ ಧರಣಿ ನಡೆಸಲು ಅನುಮತಿ ದೊರೆತಿದೆ ಎಂದರು.

ಈ ಧರಣಿ‌ ಸತ್ಯಾಗ್ರಹಕ್ಕೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು‌ ಧರಣಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ನಮ್ಮ ಜಿಲ್ಲೆಯ ಶಾಸಕರುಗಳಿಗೆ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ವಿಧಾನಸಭೆ ಅಧೀವೇಶನದಲ್ಲಿ‌ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದೇನೆ. ಜಿಲ್ಲೆಯ ಅನೇಕ ಗಣ್ಯರ ಬೆಂಬಲವನ್ನು ಕೋರಲಾಗಿದೆ. ತಹಸೀಲ್ದಾರ ಕಛೇರಿಯಲ್ಲಿ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಆರು ದಿನ‌ ಪೂರೈಸಿದ್ದು, ಇಂದು ಕೊನೆಗೊಳ್ಳಲಿದೆ ಎಂದರು.

300x250 AD

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ಅನ್ನದಾತ ರೈತ‌ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಾಮಾಜಿಕ ಕಾರ್ಯಕರ್ತ ಕೇಮು ವಂದಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top