ಪ್ರದರ್ಶನಕ್ಕೆ ಸಿದ್ಧಗೊಂಡ ನೂರಕ್ಕೂ ಅಧಿಕ ಸ್ಟಾಲ್‌ಗಳು – ವಿವಿಧ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ
ಶಿರಸಿ: ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹಾಗೂ ಶಿರಸಿ ರುಚಿ ಪ್ರಾಯೋಜಕತ್ವದಲ್ಲಿ ನಾಲ್ಕು ದಿನಗಳ ಕಾಲ ನಗರದ ವಿಕಾಸ ಆಶ್ರಮ ಮೈದಾನದಲ್ಲಿ ಏರ್ಪಡಿಸಿದ ಮಲೆನಾಡು ಮೆಗಾ ಉತ್ಸವಕ್ಕೆ ಗುರುವಾರ ಚಾಲನೆ ದೊರೆತಿದೆ.
ಗುರುವಾರ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಲೆನಾಡು ಮೆಗಾ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಓಜಸ್ ಹೆಲ್ತ್ ಬೂಸ್ಟರ್ ಹಾಗೂ ಶಿರಸಿ ರುಚಿ ತಂಡದವರು ನಾಡಿನ ಗೃಹೋದ್ಯಮ ಹಾಗೂ ನವೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ. ನಮ್ಮ ಜಿಲ್ಲೆಯ ಅನೇಕ ಗೃಹ ಉತ್ಪನ್ನಗಳ ಮಾರಾಟಕ್ಕೂ ಇದು ಉತ್ತಮ ವೇದಿಕೆಯಾಗಿದೆ. ಈ ರೀತಿಯ ಉತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಸ್ವಸಹಾಯ, ಮಹಿಳಾ ಸಂಘಗಳ ಆರ್ಥಿಕ ಗುಣಮಟ್ಟ ಅಧಿಕವಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ಹಾಗೂ ಖರೀದಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜಿಲ್ಲೆಯಲ್ಲಿ ಗೃಹೋದ್ಯಮ ಹಾಗೂ ಚಿಕ್ಕ ಕೈಗಾರಿಗೆಗಳ ಮೂಲಕ ಮಹಿಳೆಯರು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ, ಸ್ವಾವಲಂಬಿ ಬದುಕು ರೂಪಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದ ಅವರು, ಯುವಕರು ಸ್ಥಳೀಯ ಉದ್ಯಮಕ್ಕೆ ಹೆಚ್ಚೆನ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಓಜಸ್ ಹೆಲ್ತ್ ಬೂಸ್ಟರ್‌ನ ಪ್ರಮುಖ ಎಸ್.ಎಮ್.ಹೆಗಡೆ, ಅವಿನಾಶ ಹೆಗಡೆ, ಪರಮೇಶ್ವರ ಹೆಗಡೆ, ಶರತ್ ಜನ್ನು, ಶಿರಸಿರುಚಿಯ ಪ್ರಮುಖ ಮಂಜು ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.