Slide
Slide
Slide
previous arrow
next arrow

ಮೂರು ದಿನ ಪೂರೈಸಿದ ಧರಣಿ ಸತ್ಯಾಗ್ರಹ : ಸಹಕಾರಿ, ಆಟೋ ಚಾಲಕರ ಸಂಘದ ಬೆಂಬಲ

300x250 AD

ಶಿರಸಿ: ಇಲ್ಲಿನ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಗರದ ತಹಸೀಲ್ದಾರ ಕಛೇರಿ ಎದರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಶಿರಸಿಯ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಆಟೋ ರಿಕ್ಷಾ ಚಾಲಕರ ಸಂಘದವರು ಭೇಟಿ ನೀಡಿ, ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಶಿರಸಿ ನಗರದ ತಹಸೀಲ್ದಾರ ಕಚೇರಿ‌ ಎದುರು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊ‌ಂಡ ಧರಣಿ ಸತ್ಯಾಗ್ರಹ ಮೂರು ದಿನ‌ ಪೂರೈಸಿದ್ದು, ಇಂದು ಸಹ ಬೆಳಿಗ್ಗೆ 10 ಘಂಟೆಗೆ ಅನಂತಮೂರ್ತಿ ಅವರು ತಮ್ಮ ಬೆಂಬಲಿಗರೊಂದಿಗೆ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ, ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿ, ಸಾರ್ವಜನಿಕರ ಬೆಂಬಲ ಕೋರಿದರು.

ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಿರಸಿಯ ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.‌ಹೆಗಡೆ ಭೇಟಿ ನೀಡಿ ತಮ್ಮ‌ ವಯಕ್ತಿಕ ಹಾಗೂ ಸಹಕಾರಿ ಸಂಘದ ಬೆಂಬಲವನ್ನು ನೀಡಿದರು. ಡಿ. 4 ರಂದು ಸುವರ್ಣಸೌಧಕ್ಕೆ ಆಗಮಿಸಿ‌, ಸತ್ಯಾಗ್ರಹದಲ್ಲಿ ಪಾಲ್ಗೊಳ್ಳವುದಾಗಿ ತಿಳಿಸಿದರು. ನಂತರ ಯಲ್ಲಾಪುರ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಆಗಮಿಸಿ, ಧರಣಿ ಸತ್ಯಾಗ್ರಹ ಹೋರಾಟಕ್ಕೆ ಆಟೋ ಚಾಲಕರ ಸಂಘದ ಸಂಪೂರ್ಣ ಬೆಂಬಲ ನೀಡುವುದಾಗಿ ಹಾಗೂ ನಮ್ಮ ಸಂಘದ ಸದಸ್ಯರು ಬೆಳಗಾವಿಗೆ ಆಗಮಿಸುವುದಾಗಿ ತಿಳಿಸಿದರು.

ಅನಂತಮೂರ್ತಿ ಹೆಗಡೆ ಮಾತನಾಡಿ, ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ‌ ಹೋರಾಟ ನಿರಂತರ. ಇದಕ್ಕೆ ನಾವು ಯಾವುದೇ ರೀತಿಯಲ್ಲೂ ಹೆದರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಕೂಡ ಒಗ್ಗಟ್ಟಾಗಿದ್ದೇವೆ. ಇಂದು ನೂರಾರು ಜನ ಬಂದು ತಮ್ಮ ಸಹಿ ಹಾಕಿ ಬೆಂಬಲ ನೀಡಿದ್ದಾರೆ. ಇಷ್ಟು ದಿನ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ, ಆದ್ದರಿಂದ ಆಸ್ಪತ್ರೆ ಆಗೋದಿಲ್ಲ ಎಂದು ಜನರು ತಿಳಿದಿದ್ದರು. ಆದರೆ ಈಗ ಅವರಲ್ಲಿ ಒಂದು ಆಶಾಭಾವನೆ ಮೂಡುತ್ತಿದೆ.‌ ಜನರ ಉತ್ಸಾಹ ಇಮ್ಮಡಿಯಾಗುತ್ತಿದೆ. ಆಕ್ರೋಶ ಉಂಟಾಗುತ್ತಿದೆ. ಎಲ್ಲರಲ್ಲೂ ಹೋರಾಟದ ಮನೋಭಾವ ಬಂದಿದೆ ಎಂದರು.

ಸತ್ಯಾಗ್ರಹ ಸ್ಥಳಕ್ಕೆ ನೂರಾರು ಜನರು ಆಗಮಿಸಿ ಸಹಿ ಹಾಕಿ ತಮ್ಮ ಬೆಂಬಲ ಸೂಚಿಸಿದ್ದಲ್ಲದೇ, ಡಿ. 4ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಲಿರುವ ಅಧೀವೇಶನ ಸಂದರ್ಭದಲ್ಲಿ ಸುವರ್ಣಸೌಧಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಧರಣಿ ಸತ್ಯಾಗ್ರಹದಲ್ಲಿ ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ, ಯಲ್ಲಾಪುರ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ, ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ, ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಾಮಾಜಿಕ ಕಾರ್ಯಕರ್ತ ಕೇಮು ವಂದಿಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

300x250 AD

………..

Share This
300x250 AD
300x250 AD
300x250 AD
Back to top