ಅಂಕೋಲಾ: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೋರ್ವರಿಗೆ ದಾರಿ ಮಧ್ಯೆಯೇ ಹೆರಿಗೆ ಮಾಡಿಸುವ ಮೂಲಕ ಸಮುದಾಯ ಆರೋಗ್ಯಾಧಿಕಾರಿಯೋರ್ವರು ತಾಯಿ- ಮಗುವಿಗೆ ಜೀವದಾನ ಮಾಡಿದ್ದಾರೆ.
ತಾಲೂಕಿನ ಹೊನ್ನೇಬೈಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಗರ್ಭಿಣಿಯೋರ್ವರು ಸಹಜ ಪರೀಕ್ಷೆಗೆಂದು ಮನೆಯಿಂದ ತಾಲೂಕಾಸ್ಪತ್ರೆಗೆ ಆಟೋದಲ್ಲಿ ತೆರಳುತ್ತಿರುವಾಗ ರಸ್ತೆ ಮಧ್ಯದಲ್ಲೇ ಏಕಾಏಕಿ ಪ್ರಸವನೋವು ಕಾಣಿಸಿಕೊಂಡಿದೆ. ಆಟೋ ಚಾಲಕ ಮತ್ತು ಕುಟುಂಬದವರಿಗೆ ದಿಕ್ಕೇ ತೋಚದಂತಾಗಿ ಮಂಜಗುಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯ ಪಡೆಯಲು ಸಮುದಾಯ ಆರೋಗ್ಯಾಧಿಕಾರಿ ಗಣೇಶ್ ಅವರಿಗೆ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಗಣೇಶ್ ನಾಯ್ಕ ನೋವಿನಿಂದ ಬಳಲುತ್ತಿದ್ದ ಬಾಣಂತಿಯನ್ನು ಕಂಡು 8 ಕಿ.ಮೀ. ದೂರದಲ್ಲಿರುವ ತಾಲೂಕಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ತಾಯಿ- ಮಗುವಿನ ಪ್ರಾಣಕ್ಕೆ ತೊಂದರೆಯಾಗಬಹುದು ಎಂದು ಮನಗಂಡು ರಸ್ತೆಯ ಪಕ್ಕದಲ್ಲಿರುವ ಸುಕ್ರಿ ಗೌಡ ಎನ್ನುವವರ ಮನೆಗೆ ಸ್ಥಳಾಂತರಿಸಿ ಆರೈಕೆ ಮಾಡಿ ಸಹಜ ಪ್ರಸವ ಕ್ರಿಯೆ ಮಾಡಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.
ನಂತರ ಹೆಚ್ಚಿನ ಆರೈಕೆಗೆ ತಾಯಿ- ಮಗುವನ್ನು ಆಂಬ್ಯುಲೆನ್ಸ್ ಸಹಾಯದಿಂದ ತಾಲೂಕಾಸ್ಪತ್ರೆಗೆ ದಾಖಲಿಸಲಾಯಿತು. ಗರ್ಭಿಣಿ ಹೊನ್ನೇಬೈಲ್ ಗ್ರಾಮದವರಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ.
ಸರಿಯಾದ ಸಮಯಕ್ಕೆ ಧಾವಿಸಿ ಬಂದು ಸಮಯಪ್ರಜ್ಞೆ ಮೆರೆದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕರಿಗೆ ಬೆಳಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಚನಾ ನಾಯಕ ಅವರು ಅಭಿನಂದಿಸಿ ಗೌರವಿಸಿದರು. ಈ ಕಾರ್ಯಕ್ಕೆ ತಾಲೂಕಿನಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.
ಮಂಜಗುಣಿ ಭಾಗದವರ ಪಾಲಿಗೆ ದೇವರಂತಿರುವ ಗಣೇಶ ನಾಯ್ಕರು ಅದೆಷ್ಟೋ ಸ್ಥಳೀಯರ ಆರೋಗ್ಯದ ಭಾಗ್ಯವೇ ಆಗಿದ್ದಾರೆ. ತಾವು ಗುತ್ತಿಗೆಯಾಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಸಹ ಕಿಂಚಿತ್ತೂ ಬೇಸರಿಸದೆ, ತೊಂದರೆ ಎಂದ ತಕ್ಷಣ ಧಾವಿಸುತ್ತಾರೆ.
- ಮಂಜುನಾಥ ನಾಯ್ಕ, ಗ್ರಾ.ಪಂ ಸದಸ್ಯ