ಯಲ್ಲಾಪುರ: ಜಿಲ್ಲೆಯ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗುವ ಮೊದಲೇ, ಜಿಲ್ಲೆಯ ಮೂಕ ಪ್ರಾಣಿಗಳಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ನಾವು ಮನುಷ್ಯರನ್ನು ಹೇಗೆ ಆರೈಕೆ ಮಾಡುತ್ತೇವೋ, ಹಾಗೆ ಪ್ರಾಣಿಗಳನ್ನು ಆರೈಕೆ ಮಾಡಬೇಕು ಎಂದು ಮೀನುಗಾರಿಕೆ ಬಂದರುಗಳು, ಒಳನಾಡು ಜಲಸಾರಿಗೆ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ನಬಾರ್ಡ ಆರ್ಐಡಿಎಫ್ ಟ್ರಾಂಚ್ 22ರ ಯೋಜನೆಯಡಿಯಲ್ಲಿ ನಿರ್ಮಿಸಿದ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್) ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಹಿಂದೆ ನಮ್ಮ ಸರ್ಕಾರದಲ್ಲಿ ಈ ಆಸ್ಪತ್ರೆಗೆ ಮಂಜೂರಾತಿ ಕೊಡಲಾಗಿತ್ತು, ಒಳ್ಳೆಯ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಹೆಬ್ಬಾರ್ ಉದಾಹರಣೆ, ಆಗ ನಮ್ಮ ಶಾಸಕರ ಮಧ್ಯ ಅನುದಾನ ತರಲು ಬಹಳಷ್ಟು ಸ್ಪರ್ಧೆ ನಡೆಯುತ್ತಿತ್ತು, ಆಗ ಹೆಬ್ಬಾರ್ ಒಂದು ಹೆಜ್ಜೆಮುಂದೆ ಇರುತ್ತಿದ್ದರು. ಇಲ್ಲಿ ನಿವೃತ್ತ ವೈದ್ಯರ ಸೇವೆಯನ್ನು ಕೂಡ ಪಡೆಯಲಾಗುತ್ತಿದೆ. ಔಷಧಿಗಳ ಸ್ಟೋರೇಜ್ ಕೂಡ ಇಲ್ಲಿದೆ. ಪ್ರತಿ ತಾಲೂಕಿನಲ್ಲಿಯೂ ಇಂತಹ ಆಸ್ಪತ್ರೆ ನಿರ್ಮಾಣವಾಗಬೇಕು. ಇದರಿಂದ ಎಷ್ಟು ಸಾಧ್ಯವಾಗುತ್ತದೆ. ಅದರ ಪ್ರಯೋಜನ ಜಿಲ್ಲೆಯ ಜನತೆ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, 2017ರಲ್ಲಿ ಆಸ್ಪತ್ರೆ ಮಂಜೂರಿಯಾಗಿತ್ತು, ದನದ ಸಾಕಾಣಿಕೆ ವಿಷಯದಲ್ಲಿ ಘಟ್ಟದ ಮೇಲೆ ಹಾಗೂ ಕೆಳಗೆ ಬಹಳಷ್ಟು ಅಂತರವಿದೆ. ಘಟ್ಟದ ಮೇಲೆ 60 ಸಾವಿರ ಲೀಟರ್ ಹಾಲಿನ ಉತ್ಪಾದನೆಯಿದ್ದರೆ, ಘಟ್ಟದ ಕೆಳಗೆ 3 ಸಾವಿರ ಲೀಟರ್ ಹಾಲಿನ ಉತ್ಪಾದನೆಯಿದೆ. ಅಂದಿನ ಮಂತ್ರಿ ಡಿ.ಬಿ.ಜಯಚಂದ್ರ ಈ ಆಸ್ಪತ್ರೆಗೆ ಮಂಜೂರಾತಿ ನೀಡಿದರು. ಐದು ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿ ಆಸ್ಪತ್ರೆಯನ್ನು ಆಧುನಿಕಿಕರಣದೊಂದಿಗೆ ನಿರ್ಮಾಣ ಮಾಡಲಾಗಿದೆ. ಈ ಆಸ್ಪತ್ರೆಯ ಉದ್ಘಾಟನೆ ಮಾಡುವ ಯೋಗ ಮಂಕಾಳ ವೈದ್ಯರಿಗೆ ದೊರೆತಿದೆ. ಇಲ್ಲಿಯ ನಿವೃತ್ತ ವೈದ್ಯರು ಹಾಲಿ ವೈದ್ಯರು ಈ ಕಟ್ಟಡ ಆಸ್ಪತ್ರೆ ಮೇಲ್ದರ್ಜೇಗೆರಲು ಬಹಳಷ್ಟು ಕೆಲಸ ಮಾಡಿದ್ದಾರೆ. ಹಿಂದೆ ಒಂದು ಅಂಬುಲೆನ್ಸ್ ಇತ್ತು ಈಗ ಮತ್ತೊಂದು ಅಂಬುಲೆನ್ಸ್ ನೀಡಲಾಗಿದೆ. ಇದರ ಪ್ರಯೋಜನವನ್ನು ರೈತರು, ಹಾಲು ಉತ್ಪಾದಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಪಡೆಯಬೇಕೆಂದು ಹೇಳಿದರು.
ಫಲಾನುಭವಿಗಳಿಗೆ ಸಾಮಾಗ್ರಿಗಳನ್ನು ಸಚಿವರು ವಿತರಿಸಿದರು. ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುಬ್ರಾಯ ಭಟ್ಟ ಸ್ವಾಗತಿಸಿ, ನಿರೂಪಿಸಿದರು. ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ್ ಖಂಡೂ, ಶಿರಸಿ ಉಪವಿಭಾಗಾಧಿಕಾರಿ ದೇವರಾಜ, ಡಿಸಿಎಫ್ ಎಸ್.ಜಿ.ಹೆಗಡೆ, ಪಾಲಿಕ್ಲಿನಿಕ್ ಉಪನಿರ್ದೇಶನ ಡಾ.ಉಮೇಶ ಕೊಂಡಿ, ಆಡಳಿತ ಉಪನಿರ್ದೇಶಕ ಡಾ.ರಾಕೇಶ ಬಂಗ್ಲೆ ಈ ಸಂದರ್ಭದಲ್ಲಿದ್ದರು.