ಅಂಕೋಲಾ: ತಲಾತಲಾಂತರದಿ0ದ ಕಾಡಿನ ಮದ್ಯದಲ್ಲಿ ವಾಸಿಸುಸುತ್ತಿರುವ ಆದಿವಾಸಿ ಬುಡಕಟ್ಟು ಕುಟುಂಬಗಳಿಗೆ ದೇಶಕ್ಕೆ ಸ್ವಾತಂತ್ರ‍್ಯ ಬಂದು ಅಮೃತ ಮಹೋತ್ಸವ ಆಚರಣೆಯಾದರು ವಾಸ್ತವ್ಯ ಹಾಗೂ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕನ್ನು ನೀಡದಿರುವದನ್ನು ತೀವ್ರವಾಗಿ ಖಂಡಿಸಿ, ಕೂಡಲೇ ಸರಕಾರಗಳು ಅಗತ್ಯ ಕ್ರಮ ತೆಗೆದುಕೊಂಡು ಅರಣ್ಯ ಭೂಮಿ ಹಕ್ಕು ನೀಡಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಎಸ್.ವೈ.ಗುರುಶಾಂತ್ ಆಗ್ರಹಿಸಿದರು.
ಅವರು ಕೆ.ಎಲ್.ಇ. ಟಿ.ಸಿ.ಎಚ್. ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆದಿವಾಸಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 14-15 ಕೋಟಿ ಆದಿವಾಸಿಗಳಿದ್ದಾರೆ. ಆದಿವಾಸಿಗಳ ರಕ್ಷಣೆಗೆ ಸಂವಿಧಾನದ 5 ಮತ್ತು 6 ಶೇಡ್ಯಲ್‌ನಲ್ಲಿ ಹೇಳಲಾಗಿದೆ. ಅಲ್ಲದೆ ಆದಿವಾಸಿ ಉಪಯೋಜನೆಗಳು ಇದೆ, ಆದರೂ ಮೂಲಭೂತ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರು ಕೇಂದ್ರ ಸರಕಾರ ಗಮನಹರಿಸುತ್ತಿಲ್ಲ. ಅರಣ್ಯ ಭೂಮಿ ಹಕ್ಕು ಪತ್ರಕ್ಕೆ ಹಾಕಿದ 2.26 ಲಕ್ಷ ಅರ್ಜಿಗಳಲ್ಲಿ ಹನ್ನೆರಡು ಸಾವಿರ ಅರ್ಜಿಗಳನ್ನು ಮಾತ್ರ ಪರಿಗಣಿಸಿ ತೀವ್ರ ಅನ್ಯಾಯ ಮಾಡಲಾಗಿದೆ, ಆದರೆ 2.28 ಲಕ್ಷ ಭೂಮಿಯನ್ನು ಅಂಬಾನಿ-ಅದಾನಿಗಳಿಗೆ ಈ ಅವದಿಯಲ್ಲಿ ನೀಡಲಾಗಿದೆ. ಈ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟ ಒಂದೇ ದಾರಿ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅದ್ಯಕ್ಷ ಶಾಂತಾರಾಮ ನಾಯಕ ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡಿ, ಈ ದೇಶ ನಮ್ಮದು, ಈ ನೆಲ ನಮ್ಮದು, ನಮ್ಮನ್ನು ಒಕ್ಕಲೆಬ್ಬಿಸಲು ಇವರ್ಯಾರು ಎಂದು ಪ್ರಶ್ನಿಸಿದರು. ರಾಜ್ಯ ಅರಣ್ಯ ಸಚಿವರು ಪದೇ ಪದೆ ಒಕ್ಕಲೆಬ್ಬಿಸುತ್ತೇವೆ ಎಂದು ಹೇಳುತ್ತಿರುವದನ್ನು ತೀವ್ರವಾಗಿ ಖಂಡಿಸಿದರು. ಅತಿಥಿಗಳಾಗಿ ಭಾಗವಹಿಸಿದ ಲಕ್ಷ್ಮೀ ಸಿದ್ದಿ ನಿರ್ಣಯ ಮಂಡಿಸಿದರು. ಸಿಐಟಿಯು ಮುಖಂಡರಾದ ಯಮುನಾ ಗಾಂವ್ಕರ್, ತಿಲಕ್ ಗೌಡ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡರಾದ ಭೀಮಣ್ಣ ಬೋವಿ, ಎಚ್.ಬಿ. ನಾಯಕ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಂಚಾಲಕ ಪ್ರೇಮಾನಂದ ವೇಳಿಪ್ ಮಾತನಾಡಿ, ತಮ್ಮ ಬೇಡಿಕೆಗಳಿಗಾಗಿ ಎಲ್ಲಾ ಆದಿವಾಸಿ ಪಂಗಡಗಳು ಒಂದಾಗಬೇಕು, ಕುಣಬಿ, ಹಾಲಕ್ಕಿ, ಕುಂಬ್ರಿ ಮರಾಠಿ, ಗೌಳಿ ಮುಂತಾದ ಬುಡಕಟ್ಟು ಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ರಾಜೇಶ ಗಾವುಡಾ ವರದಿ ವಾಚಿಸಿದರು, ತಿಮ್ಮಪ್ಪ ಗೌಡ ಸ್ವಾಗತ ಕೋರಿ ಕಾರ್ಯಕ್ರಮ ನಿರ್ವಹಿಸಿದರು.