ಸೊರಬ: ಮಲೆನಾಡು, ಕೆರೆ-ಕಾನು ಸಂರಕ್ಷಣಾ ಸಮಾವೇಶ ನ.3 ರಂದು ಬೆಳಿಗ್ಗೆ 10ಗಂಟೆಯಿಂದ ವೃಕ್ಷ ಲಕ್ಷ ಆಂದೋಲನದ ಆಶ್ರಯದಲ್ಲಿ ಐತಿಹಾಸಿಕ ಸ್ಥಳವಾದ ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಕೆರೆ-ಕಾನು ಸಂರಕ್ಷಣೆ ಕುರಿತ ಸಮಾವೇಶ ನಡೆಯಲಿದೆ.
ಮಲೆನಾಡಿನ ಕೆರೆ-ಕಾನು, ಜೀವ ವೈವಿಧ್ಯ ಉಳಿವಿಗೆ ನಡೆದಿರುವ ಅಭಿಯಾನ ಬಲಪಡಿಸುವ ಉದ್ದೇಶ ಹೊಂದಿರುವ ಸಮಾವೇಶ ಉದ್ರಿ ಕೋಟೆಕೆರೆಗೆ ಜಾಥಾ ಪೂಜೆಯೊಂದಿಗೆ ಆರಂಭವಾಗಲಿದೆ. ಹಲವು ಹಳ್ಳಿಗಳ ಯಶೋಗಾಥೆಗಳ ಮಂಡನೆ, ಕೆರೆ-ಕಾನು, ಮಲೆನಾಡಿನ ಜಲಮೂಲಗಳು, ಸಾಧಕರಿಗೆ ಸನ್ಮಾನ ನಡೆಯಲಿದೆ. ಕಾನು ಸಂರಕ್ಷಣಾ ಹೋರಾಟ ಚುರುಕುಗೊಳಿಸಲು ಸಮಾವೇಶ ಚರ್ಚಸುವುದರ ಜೊತೆ, ಕೆರೆ ನಿರ್ವಹಣಾ ಸಂಘಗಳನ್ನು ಸಕ್ರಿಯ ಗೊಳಿಸಲು ಹಕ್ಕೊತ್ತಾಯ ಮಾಡಲಾಗುತ್ತದೆ. ಬರಗಾಲದ ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ಕೆರೆ-ಕಾನು ಸಮಾವೇಶ ಮಹತ್ವ ಪಡೆದಿದೆ. ಪಶ್ಚಿಮ ಘಟ್ಟದ ಅಳಿದು ಉಳಿದ ಕಾನು, ಬೆಟ್ಟಗಳ ರಕ್ಷಣೆಗೆ ಜಂಟಿ ಕಾರ್ಯತಂತ್ರ ರೂಪಿಸಲು ಸಮಾವೇಶ ಒತ್ತು ನೀಡಲಿದೆ.
ಕೆರೆ ಸಂಘಗಳು, ಅರಣ್ಯ ಸಮಿತಿಗಳು, ಸಂಸ್ಥೆಗಳು ಯಲ್ಲಾಪುರ, ಸಿದ್ದಾಪುರ, ಶಿರಸಿ, ಸೊರಬ, ಸಾಗರದ ಜೀವ ವೈವಿಧ್ಯ ಸಮಿತಿಗಳು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಜಾಥಾ, ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಶಿವಮೊಗ್ಗಾ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜೀವವೈವಿಧ್ಯ ಮಂಡಳಿ, ಸದಸ್ಯ ಕಾರ್ಯದರ್ಶಿ ಡಾ.ಜಗತ್ ರಾಮ್, ಅರಣ್ಯ ಇಲಾಖೆಯ ಉನ್ನತ ಅಧಿಕಾರಿ, ಬ್ರಿಜೇಶಕುಮಾರ, ಪ್ರಾಚ್ಯ ವಸ್ತು ಇಲಾಖೆಯ ರಾಜ್ಯ ನಿರ್ದೇಶಕ, ಡಾ. ಶೇಜೇಶ್ವರ ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ. ಟಿ. ವಿ. ರಾಮಚಂದ್ರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಕೆರೆ-ಕಾನು ಸಮಾವೇಶದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ : ಶ್ರೀಪಾದ ಬಿಚ್ಚುಗತ್ತಿ ಮೊ.ನಂ. :Tel:+918197553400
ಗಣಪತಿ ಕೆ. ಬಿಸ್ಲಕೊಪ್ಪ ಮೊ.ನಂ. :Tel;+919481461612