ಯಲ್ಲಾಪುರ: ನ.1ರಿಂದ 5ರವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ 37ನೇ ಸಂಕಲ್ಪ ಉತ್ಸವ ನಡೆಯಲಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1ರಂದು ಸಂಜೆ 6 ಗಂಟೆಗೆ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲಿ ಶ್ರೀಗಳು ಉದ್ಘಾಟಿಸುವರು. ಉತ್ಸವದ ಅಂಗವಾಗಿ ಗಮಕವಾಚನ, ನೃತ್ಯರೂಪಕ, ಕೀರ್ತನೆ, ಭಕ್ತಿ ಸಂಗೀತ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನ.4ರಂದು ಡಾ.ಕೆ.ಶಿವರಾಮ ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಉಪನ್ಯಾಸ ನೀಡಲಿದ್ದಾರೆ ಎಂದರು. ನ.5 ರಂದು ಮಹಿಳಾ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ರಾಘವೇಶ್ವರ ಭಾರತೀ ಸ್ವಾಮಿ ಆಧ್ಯಾತ್ಮಿಕ ಶಿಕ್ಷಣದ ಕುರಿತು ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.
ಶಿಕ್ಷಣ ಪ್ರೇಮಿ ಡಾ.ಬಿ.ಜಿ.ಹೆಗಡೆ, ಜ್ಯೋತಿರ್ವನಮ್ ಸಂಸ್ಥಾಪಕ ಕೆ.ಸಿ.ನಾಗೇಶ ಭಟ್ಟ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ರೈತ ಹೋರಾಟಗಾರ ಪಿ.ಜಿ. ಭಟ್ಟ, ವನ್ಯಜೀವಿ ಸಂಶೋಧಕ ಗೋಪಾಲಕೃಷ್ಣ ಹೆಗಡೆ, ಮಳೆಕೊಯ್ತು ಅಭಿಯಾನದ ರೂವಾರಿ ಚಂದ್ರು ಎಸಳೆ, ಕೃಷಿ ಮಹಿಳೆ ಆಶಾ ನಾಯಕ, ಕ್ರೀಡಾಪಟು ನಯನಾ ಕೊಕರೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಾಗೇಶ ಯಲ್ಲಾಪುರಕರ ಮತ್ತು ರಾಮು ನಾಯ್ಕ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ, ಪ್ರಮುಖರಾದ ಪಿ.ಜಿ.ಹೆಗಡೆ, ಸಿ.ಜಿ. ಹೆಗಡೆ, ಜಿ.ಎಸ್.ಭಟ್ಟ, ನಾಗೇಂದ್ರ ಕವಾಳೆ, ಗೋಪಣ್ಣ ತಾರೀಮಕ್ಕಿ, ಮಾಚಣ್ಣವರನಮನೆ, ಶ್ರೀಪಾದ ಭಟ್ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ನ.1ರಂದು ಸೀಮಾ ಭಾಗ್ವತ ತಂಡದಿಂದ ನೃತ್ಯರೂಪಕ ಯಕ್ಷಗಾನ ಭೀಷ್ಮ ವಿಜಯ, ನ.2ರಂದು ಪ್ರತೀಮಾ ಭಟ್ಟ ಕೋಡುರು ಕೀರ್ತನೆ, ಯಕ್ಷಗಾನ ಸುಧಾನ್ವಾರ್ಜುನ, ನ.3ರಂದು ದತ್ತಾತ್ರೇಯ ವೇಲಣಕರ ಭಕ್ತಿ ಸಂಗೀತ, ಯಕ್ಷಗಾನ ಕನಕಾಂಗಿ ಕಲ್ಯಾಣ, ನ.4ರಂದು ಯೋಗ ನೃತ್ಯ, ಯಕ್ಷಗಾನ ಕೀಚಕವಧೆ ಹಾಗೂ ನೇತ್ರದಾನ ಉಪನ್ಯಾಸ. ನ.5ರಂದು ಮಹಿಳಾ ಆರೋಗ್ಯ ತಪಾಸಣೆ ಮಾತೃವೃಂದದಿಂದ ಭಜನಾಮೃತ ಹಾಗೂ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರಿಂದ ಪ್ರವಚನ ‘ಆಧ್ಯಾತ್ಮಿಕ ಶಿಕ್ಷಣ’ ನಂತರ ಯಕ್ಷಗಾನ ಚೂಡಾಮಣಿ’ ದರ್ಶನ ನಡೆಯಲಿದೆ.