ಗೋಕರ್ಣ: ನಾಳೆ ಏನಾಗಬೇಕೆಂಬುದನ್ನು ನಿರ್ಧರಿಸುವ ಸಾಮರ್ಥ್ಯ, ಏನೇನು ಮಾಡಬೇಕೆಂಬುದರ ಅರಿವನ್ನು ನಾವು ಬೆಳೆಸಿಕೊಳ್ಳಬೇಕು. ಅವನ್ನೆಲ್ಲಾ ಮಾಡಲು ಉದ್ಯುಕ್ತರಾಗಬೇಕು ಎಂದು ಜಾಯ್ನ್ ಇಂಡಿಯನ್ ಆರ್ಮಿ ಟೀಮ್ ಉತ್ತರಕನ್ನಡದ ಸಂಸ್ಥಾಪಕರೂ, ಹಿರೇಗುತ್ತಿ ಗ್ರಾಮ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳೂ ಆದ ನವೀನ್ ನಾಯ್ಕ ಪ್ರೇರಕ ನುಡಿಗಳನ್ನಾಡಿದರು.
ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸೈನಿಕ ನೇಮಕಾತಿ ಕಾರ್ಯಾಗಾರದಲ್ಲಿ ಮಾರ್ಗದರ್ಶಕರಾಗಿ ಮಾತನಾಡಿದ ಅವರು, ಸೈನಿಕ ನೇಮಕಾತಿಯ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ನಡೆಸಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಸುವಿವರವಾಗಿ ಮಾಹಿತಿಗಳನ್ನು ನೀಡಿದರು.
ಭಾರತೀಯ ಸೈನ್ಯದ ಬೇರೆ ಬೇರೆ ರೆಜಿಮೆಂಟ್ಗಳಿಗೆ ಆಯ್ಕೆಯಾದ ಜಿಲ್ಲೆಯ ಸುಜಯ ದೇವಾಡಿಗ ಭಟ್ಕಳ, ವಿನಯ ನಾಯ್ಕ ಭಟ್ಕಳ, ಅಲೋಕ ಶೆಟ್ಟಿ ಹೊನ್ನಾವರ, ಗಣಪತಿ ನಾಯ್ಕ ಕಾಗಾಲ, ಸಾಗರ ಹರಿಕಾಂತ ಕುಮಟಾ, ರೋಹಿತ ಹರಿಕಾಂತ ಅಘನಾಶಿನಿ, ಪುನೀತ ಪಟಗಾರ ಕಡತೋಕ, ಹಾಗೂ ಗೌರೀಶ ಪಟಗಾರ ಕಡತೋಕ, ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ನಾಗರಾಜ ಗಾಂವಕರ್ ಪ್ರಗತಿಗಾಗಿ ನಮ್ಮ ಮಾರ್ಗ ಬದಲಿಸಬೇಕಿದೆ. ವಿವೇಕವಂತರಾಗಿ ಬದುಕು ನಡೆಸಲು ಸಮತೋನದ ಮಹತ್ವ ಅರಿತು ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು. ಉಪನ್ಯಾಸಕರಾದ ರಮೇಶ ಗೌಡ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಶಾರದಾ ನಾಯಕ ಸ್ವಾಗತಿಸಿದರು. ಸುಜಾತಾ ನಾಯಕ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಎಲ್ಲಾ ಉಪನ್ಯಾಸಕರು ಭಾಗಿಯಾಗಿ ಯಶಸ್ವಿಗೊಳಿಸಿದರು.