ಶಿರಸಿ: ಅಡಿಕೆ ಬೆಳೆ ರೋಗದಿಂದ ಸುರಕ್ಷಿತ ಎಂಬ ಭಾವನೆ ಇಂದಿಲ್ಲ. ತಳಮಟ್ಟದ ಅಧ್ಯಯನ ಆಗುತ್ತಿಲ್ಲ. ಕ್ಷೇತ್ರ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅರಿತು ಸಂಶೋಧನೆ ಆಗಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ನಗರದ ತೋಟಗಾರಿಕಾ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಿ ವಿತರಣೆ ಮತ್ತು ಜಾಗೃತಿ ಸಪ್ತಾಹ ಉದ್ಘಾಟನೆ ಹಾಗೂ ರೈತರಿಗೆ ವಿವಿಧ ಯೋಜನೆಗಳ ಕಾರ್ಯಾದೇಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ತೋಟಗಾರಿಕಾ ಇಲಾಖೆಯ ಸಚಿವರ ಭೇಟಿ ಮಾಡಿ ಸೂಕ್ತ ಪರಿಹಾರ ಒದಗಿಸುವಂತೆ ಕೋರಲಾಗಿದೆ. ಜತೆ, ರೈತರಿಗೆ ರೋಗ ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ಅಧ್ಯಯನ ಕೈಗೊಳ್ಳಲು ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ತೋಟಗಾರಿಕಾ ಇಲಾಖೆ ವತಿಯಿಂದ ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಔಷಧಿ ವಿತರಿಸಬೇಕು ಎಂದು ಸೂಚಿಸಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ಮಾತನಾಡಿ, ಜಿಲ್ಲೆಯಲ್ಲಿ ದಾನಮಾವಿನಲ್ಲಿ ಪ್ರಥಮ ಬಾರಿಗೆ ಎಲೆಚುಕ್ಕೆ ರೋಗ ಕಂಡು ಬಂದಿತ್ತು. ಕಳೆದೊಂದು ವರ್ಷದಲ್ಲಿ 8600 ಹೆಕ್ಟೇರ್ ಪ್ರದೇಶದಲ್ಲಿ ರೋಗ ವ್ಯಾಪಿಸಿದೆ. ಇಂತಹ ಕಾಲಘಟ್ಟದಲ್ಲಿ ರೈತರ ಹಿತ ಕಾಯಲು ಇಲಾಖೆ ವತಿಯಿಂದ ಕ್ರಮವಹಿಸಲಾಗುತ್ತಿದೆ ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಉಪನಿರ್ದೇಶಕ ಸತೀಶ ಹೆಗಡೆ, ತೋಟಗಾರಿಕಾ ತಜ್ಞ ವಿ.ಎಂ.ಹೆಗಡೆ, ಸಹಕಾರಿ ಜಿ.ಆರ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ತೋಟಗಾರಿಕಾ ಅಧಿಕಾರಿ ಗಣೇಶ ಹೆಗಡೆ ನಿರೂಪಿಸಿದರು.