ಕುಮಟಾ: ಗೋಕರ್ಣ ಭಾಗದ ಜನರು ಅಗತ್ಯವಾದ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಜೋಡಣೆ ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಮುಖಂಡ ನಿವೇದಿತ್ ಆಳ್ವಾ ಅವರು ಆಧಾರ್ ಲಿಂಕ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಕಂದಾಯ ಸಚಿವರನ್ನು ಭೇಟಿ ಮಾಡಿ ಸದರಿ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಆಳ್ವಾ ಅವರು ಕಂದಾಯ ಸಚಿವ ಕೃಷ್ಣೇ ಭೈರೇಗೌಡ ಅವರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದ್ದು, ಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ಗೆ ಫೋನ್ ನಂಬರ್ ನೋಂದಾಯಿಸಿಕೊಳ್ಳುವ ಅಗತ್ಯವಿದ್ದು, ನೋಂದಣಿ ಕುಂಠಿತವಾಗುತ್ತಿತ್ತು. ಈಗ ಗೋಕರ್ಣ ಸೇರಿ ಹತ್ತಿರದ ನಾಡುಮಾಸ್ಕೇರಿ, ಹನೇಹಳ್ಳಿ, ತೋರ್ಕೆ, ಹಿರೇಗುತ್ತಿ ಮುಂತಾದ ಗ್ರಾಮ ಪಂಚಾಯಿತಿಯ 50,000ಕ್ಕೂ ಹೆಚ್ಚಿನ ಗ್ರಾಮಸ್ಥರು ಗ್ಯಾರಂಟಿ ಯೋಜನೆಗಳಿಗೆ ಹೆಸರು ನೋಂದಾಯಿಸಬೇಕಾಗಿದ್ದು, ಅವರು ಗೋಕರ್ಣದ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು ಇದನ್ನು ಸರಿಪಡಿಸುವಂತೆ ಸಂಬ0ಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ನಿವೇದಿತ್ ಆಳ್ವಾ ತಮ್ಮ ಮನವಿಯಲ್ಲಿ ವಿನಂತಿಸಿಕೊ0ಡಿದ್ದಾರೆ.