ಹಳಿಯಾಳ: ಎಂಟು ಬಾರಿ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಇಲ್ಲಿನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
2014ರ ಹಳಿಯಾಳದ ಪ್ರಕರಣವೊಂದರಲ್ಲಿ ಬೆಳಗಾವಿಯ ಜಿಲ್ಲೆಯ ಕಿತ್ತೂರು ಸೋಮವಾರಪೇಟೆಯ ದಸ್ತಗೀರ ಮುಲ್ಲಾ ಎನ್ನುವಾತ ಆರೋಪಿಯಾಗಿದ್ದ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಂಟು ಬಾರಿ ವಾರೆಂಟ್ ಜಾರಿ ಮಾಡಿದ್ದರೂ ತಲೆಕೆಡಸಿಕೊಳ್ಳದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ. ಆದರೆ ಸ್ಥಳೀಯ ನ್ಯಾಯಾಲಯದ ಆದೇಶದಂತೆ, ಸಿಪಿಐ ಸುರೇಶ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ವಿನೋದ ರೆಡ್ಡಿ ಹಾಗೂ ಅಮೀನ್ ಸಲಹೆ ಮೇರೆಗೆ ಪ್ರತ್ಯೇಕ ತಂಡಗಳನ್ನ ರಚಿಸಿ ಈತನ ಬಂಧನಕ್ಕೆ ಬಲೆಬೀಸಲಾಗಿತ್ತು.
ತಂಡದ ಪೈಕಿ ಕಾನ್‌ಸ್ಟೇಬಲ್‌ಗಳಾದ ಡ್ಯಾನಿ, ಶಂಕರಲಿಂಗ ಕ್ಷತ್ರೀಯ ಬೆಳ್ಳಂಬೆಳಿಗ್ಗೆ ಬೆಳಗಾವಿಗೆ ತೆರಳಿ, ಅಲ್ಲಿನ ಸ್ಥಳೀಯ ಪೊಲೀಸ್ ಸಿಬ್ಬಂದಿ ಸಂಜು ನಂದಗಡರ ಸಹಕಾರದಲ್ಲಿ, ತಾಂತ್ರಿಕ ಮಾಹಿತಿಗಳನ್ನಾಧರಿಸಿ ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.