ಹಳಿಯಾಳ: ನಗರದ ಚಂದಾವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮಹಾತ್ಮ ಗಾಂಧೀಜಿ, ಸರ್ವೆಪಲ್ಲಿ ರಾಧಾಕೃಷ್ಣನ್, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ದಿನಕರ ದೇಸಾಯಿ ಕುರಿತಾದ ಸ್ಮರಣಾಂಜಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀರಂಗನಾಥ ವಾಲ್ಮೀಕಿ ಅವರು ನಾಲ್ವರು ಮಹಾನ್ ಚೇತನರ ಜೀವನ ನಮಗೆ ಆದರ್ಶ ಎಂದರು. ‘ಬಾಪೂಜಿ ನೀವು ಅಮರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆಯ ಶಿಕ್ಷಕಿ ದಿವ್ಯಾ ಎಂ.ಹೆಚ್. ಅವರು ಮಹಾತ್ಮ ಗಾಂಧೀಜಿಯವರು ಅಹಿಂಸೆಯಿAದ ಜಗತ್ತನ್ನೇ ಗೆದ್ದ ಮಹಾನ್ ಸಂತ ಅವರು ಹಾಕಿಕೊಟ್ಟ ಮಾರ್ಗವೇ ಇಂದು ವಿಶ್ವವನ್ನು ಕಾಪಾಡುವ ಮಂತ್ರ ಎಂದು ಹೇಳಿದರು.
‘ದಿನಕರನ ಸಾಹಿತ್ಯ ಪ್ರಭೆ’ ಎಂಬ ವಿಷಯದ ಕುರಿತು ಮಾತನಾಡಿದ ಮಂಗಳವಾಡದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜನಾರ್ಧನ ಮಡಿವಾಳ ಅವರು ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಚುಟುಕು ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿದ ಮಹಾನ್ ಲೇಖಕ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿಯವರು ಕನ್ನಡ ಸಾಹಿತ್ಯ ಪರಿಷತ್ತು ಹಳಿಯಾಳ ತಾಲೂಕ ಘಟಕದಿಂದ ಪ್ರತಿ ತಿಂಗಳು ವಿವಿಧ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಈ ನಾಲ್ಕು ಜನಚೇತನರ ಜಯಂತಿಯ ನಿಮಿತ್ತ ಮಾಡಿದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಹಳಿಯಾಳದ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಜಿ.ಡಿ.ಗಂಗಾಧರ್ ಹಾಗೂ ಗಾಂಧಿವಾದಿ, ನಿವೃತ್ತ ಉಪನ್ಯಾಸಕ ಸುರೇಶ್ ಕಡೆಮನಿ ಅವರು ಮಾತನಾಡಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಹಳಿಯಾಳ ತಾಲೂಕಿನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ‘ಆದರ್ಶ ವಿದ್ಯಾರ್ಥಿ’ ಎಂಬ ವಿಷಯದ ಕುರಿತಾದ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ರೇವಣಸಿದ್ದಯ್ಯ ವಿ.ಎಸ್., ಶಿವಪ್ರಸಾದ ಹಿರೇಗುತ್ತಿ, ರೂಪಾ ಶಿಂಧೆ, ಲೀಲಾಧರ ಮೊಗೇರ ಹಾಗೂ ನಾಗರತ್ನಾ ಗಾಂವಕರಗೆ ‘ಕವನಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಸಾಪ ಪದಾಧಿಕಾರಿಗಳಾದ ವಿಠ್ಠಲ್ ಕೊರ್ವೇಕರ ಕಾರ್ಯಕ್ರಮ ನಿರೂಪಿಸಿದರು. ಕಾಳಿದಾಸ ಬಡಿಗೇರ ಸ್ವಾಗತಿಸಿದರು. ಶಾಂತಾರಾಮ ಚಿಬ್ಬುಲಕರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಶಾಂತ ನಾಯಕ, ಜೇಮ್ಸ್ ಡಿಸೋಜಾ, ಜಾಕಿರ್ ಜಂಗೂಬಾಯಿ, ಗೋಪಾಲ ಮೇತ್ರಿ, ಬಸವರಾಜ ಇಟಗಿ, ಗೋಪಾಲ ಅರಿ ಹಾಗೂ ಇತರ ಗಣ್ಯರು, ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಹಾಜರಿದ್ದರು.