ಕಾರವಾರ: ನಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳಮಕ್ಕಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಎಲ್. ಗೌಡ ವಹಿಸಿದ್ದರು. ಮುಖ್ಯಾಧ್ಯಾಪಕ ಅಖ್ತರ ಜೆ. ಸೈಯದ್, ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಣುಕಾ ಆರ್. ಸಾತುಮನೆ, ಅಡುಗೆ ಸಿಬ್ಬಂದಿಗಳು ಹಾಗೂ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.
ಮಕ್ಕಳಿಗೆ ಸಂವಿಧಾನ ಪೀಠಿಕೆಯನ್ನು ತಮ್ಮ ಸ್ವಂತ ಕೈಬರಹದಿಂದ ಬರೆದುಕೊಂಡು ಬರುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಬಣ್ಣ ಬಣ್ಣದ ಬಾರ್ಡರನ್ನು ಹಾಕಿ ಸಂವಿಧಾನ ಪೀಠಿಕೆಯನ್ನು ಅಂದವಾಗಿ ಬರೆದುಕೊಂಡು ಬಂದಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸಂವಿಧಾನ ಪೀಠಿಕೆಯ ಮಹತ್ವವನ್ನು, ಸರಕಾರ ಇಟ್ಟುಕೊಂಡ ಗುರಿಯನ್ನು ವಿವರಿಸಿ ಸಂವಿಧಾನ ಪೀಠಿಕೆಯನ್ನು ಓದಿದರು.
ಮಕ್ಕಳು ಅದನ್ನು ನಿರರ್ಗಳವಾಗಿ ಓದಿ ಭಾರತ ಸಂವಿಧಾನದ ಮಹತ್ವವನ್ನು ಅರಿತುಕೊಂಡದ್ದು ವಿಶೇಷವಾಗಿತ್ತು. ಗ್ರಾಮ ಪಂಚಾಯತ ಅಧ್ಯಕ್ಷರು ಮಕ್ಕಳ ಚಟುವಟಿಕೆಗೆ ಅಭಿನಂದಿಸಿ ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಕಾರ್ಯಗಳಲ್ಲಿ ಮುಂದು ಬರಲೆಂದು ಹಾರೈಸಿದರು. ಮುಖ್ಯ ಶಿಕ್ಷಕ ಅಖ್ತರ ಸೈಯದ್ ಸ್ವಾಗತಿಸಿದರು. ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.