ದಾಂಡೇಲಿ: ಇಂದು ಎಲ್ಲದಕ್ಕೂ ಶಿಕ್ಷಣವೆ ಮೂಲ. ಆ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರ ಸದೃಢಗೊಂಡಲ್ಲಿ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಹೇಳಿದರು.
ಅವರು ಗುರುವಾರ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಬೆಥನಿ ಶಿಕ್ಷಣ ಸಂಸ್ಥೆಯ ಪ್ಲಾಟೀನಂ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ದೇಶವ್ಯಾಪಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಶಿಕ್ಷಣ ಸೇವೆ ನೀಡುತ್ತಿರುವ ಬೆಥನಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸೇವಾ ಕೈಂರ‍್ಯ ಅತ್ಯಂತ ಶ್ಲಾಘನೀಯವಾಗಿದೆ. ಶಿಸ್ತು ಮತ್ತು ಬದ್ಧತೆಯಿಂದ ಬೆಥನಿ ಶಿಕ್ಷಣ ಸಂಸ್ಥೆ ಶಿಕ್ಷಣದ ದಾಸೋಹದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ಸಾಧನೆ ನಿತ್ಯ ನಿರಂತರವಾಗಿ ಮುಂದುವರಿಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಪೌರಾಯುಕ್ತ ಆರ್.ಎಸ್.ಪವಾರ್ ಮಾತನಾಡಿ, ಅವರು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆ ಶಿಸ್ತು ಮತ್ತು ಅತ್ಯುತ್ತಮ ಕಲಿಕೆಗೆ ಹೆಸರುವಾಸಿಯಾದ ಸಂಸ್ಥೆಯಾಗಿದ್ದು, ಇದು ದಾಂಡೇಲಿಗೆ ಹೆಮ್ಮೆ ಎಂದರು. ಪಾಲಕರ ಸಂಘದ ಉಪಾಧ್ಯಕ್ಷ ಎಸ್.ಪ್ರಕಾಶ್ ಶೆಟ್ಟಿ, ಬೆಥನಿ ಶಿಕ್ಷಣ ಸಂಸ್ಥೆ ಒಂದು ನಿರ್ದಿಷ್ಟವಾದ ಉದ್ದೇವನ್ನಿಟ್ಟುಕೊಂಡು ಹಾಗೂ ಗುಣಮಟ್ಟದಲ್ಲಿ ಎಂದು ರಾಜಿ ಮಾಡಿಕೊಳ್ಳದೇ ಅತ್ಯುತ್ತಮವಾಗಿ ಶೈಕ್ಷಣಿಕ ಸೇವೆಯನ್ನು ನೀಡುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆಯನ್ನು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ದಕ್ಷಿಣ ಆಪ್ರಿಕಾದಲ್ಲಿ ಉನ್ನತ ಉದ್ಯೋಗದಲ್ಲಿರುವ ಅಶೀಸ್ ಮಂಡೋನ್ಸಾ ಅವರು ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ನಾನು. ನನ್ನ ಜೀವನದ ಶ್ರೇಯಸ್ಸಿಗೆ ಮತ್ತು ಸಾಧನೆಗೆ ಈ ಶಾಲೆಯ ಕೊಡುಗೆ ಮಹತ್ವಪೂರ್ಣವಾಗಿದೆ. ಶಿಕ್ಷಣದ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಹಾಗೂ ನೈತಿಕ ಶಿಕ್ಷಣವನ್ನು ಮಾತೃ ವಾತ್ಸಲ್ಯದಿಂದ ನೀಡುವ ಈ ಸಂಸ್ಥೆಯ ಶೈಕ್ಷಣಿಕ ಸೇವೆ ಸದಾ ಸ್ಮರಣೀಯ ಎಂದರು.
ಮುಖ್ಯ ಅತಿಥಿಗಳಾಗಿ ನಗರ ಸಭಾ ಸದಸ್ಯರಾದ ನರೇಂದ್ರ ಚೌವ್ಹಾಣ್, ಹಳೆದಾಂಡೇಲಿ ಚರ್ಚಿನ ಧರ್ಮಗುರುಗಳಾದ ಫಾ.ಮಾರ್ಕ್ ಫರ್ನಾಂಡೀಸ್, ಸಿ.ಆರ್.ಪಿ ಲಲಿತಾ ನಾಯ್ಕ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಕ್ಲಾರೆಟ್, ಶಾಲಾ ಅಧೀಕ್ಷಕಿ ಸಿಸ್ಟರ್ ವೀಣಾ, ಶಾಲಾ ಮುಖ್ಯ ಶಿಕ್ಷಕಿ ವಿನಿತಾ ಡಯಾಸ್ ಉಪಸ್ಥಿತರಿದ್ದರು.
ಶಿಕ್ಷಕಿ ರೋಸಿಟಾ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವಿನಿತಾ ಡಯಾಸ್ ಅವರು ವರದಿ ವಾಚಿಸಿದರು. ಶಿಕ್ಷಕಿ ಸನಾ ವಂದಿಸಿದರು. ಶಿಕ್ಷಕಿ ಸೋನಿಯಾ ಕರ‍್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆಯ ಬೋಧಕ ವೃಂದ ಮತ್ತು ಬೋಧಕೇತರ ವೃಂದದವರು ಶ್ರಮಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.