ಶಿರಸಿ: ಪ್ರತಿಯೊಬ್ಬರಲ್ಲೂ ಒಳ್ಳೆಯ ಅಂಶಗಳು ಇರುತ್ತವೆ. ಆ ಒಳ್ಳೆಯ ಅಂಶಗಳನ್ನು ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಭರತನಳ್ಳಿ ಸೀಮೆಯ ಶಿಷ್ಯರು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದ ಅವರು, ನಮ್ಮೊಳಗೆ ಒಂದಷ್ಟು ಒಳ್ಳೆಯ ಅಂಶಗಳೂ, ಕೆಟ್ಟ ಅಂಶಗಳೂ ಇವೆ. ನಮ್ಮಲ್ಲಿನ ಒಳ್ಳೆಯ ಅಂಶಗಳು ಬೆಳೆಯುವಂತೆ ಮಾಡಬೇಕು. ಕೆಟ್ಟ ಅಂಶಗಳನ್ನು ನಿಯಂತ್ರಿಸುತ್ತಲೇ ನಂತರ ಅವು ಕ್ಷೀಣ ಆಗುವಂತೆ ಮಾಡಬೇಕು. ಆ ಕ್ರಮ ಎಲ್ಲರೂ ಅನುಸರಿಸಬೇಕು ಎಂದು ಸೂಚಿಸಿದರು.
ಪ್ರತಿಯೊಬ್ಬರೂ ಅವರೊಳಗೆ ಒಂದು ಪರಿವರ್ತನೆ ತಂದುಕೊಳ್ಳಬೇಕು. ಒಂದು ಪರಮಾತ್ಮನ ಸಾಕ್ಷಾತ್ಕಾರ ಮೂಲಕ ಮೋಕ್ಷ ಪಡೆಯಲು ಅಥವಾ ಉತ್ತಮ ಸ್ವರ್ಗಾದಿ ಲೋಕ ಪಡೆಯುವ ನಿಟ್ಟಿನಲ್ಲಿ ಪರಿವರ್ತನೆ ತಂದುಕೊಳ್ಳಬೇಕು. ಸುಧಾರಣೆಗೆ ಏನೆಲ್ಲ ಪ್ರಯತ್ನ ಮಾಡಬೇಕೋ ಅದೇ ಧರ್ಮಾಚರಣೆ. ನಮ್ಮೊಳಗಿನ ಪರಿವರ್ತನೆಗೆ ಧರ್ಮಾಚರಣೆ ಬೇಕು ಎಂದ ಶ್ರೀಗಳು, ನಮ್ಮೊಳಗಿನ ಆಲಸ್ಯವನ್ನೂ ಬಿಡುತ್ತ ನಡೆಯಬೇಕು. ಆಲಸ್ಯ ಬಿಡಲು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು, ನಿಯಮಿತ ದಿನಚರಿ ಹಾಕಿಕೊಂಡು ಗುರಿ ತಲುಪಬೇಕು ಎಂದರು.
ಎಲ್ಲರ ಮನಸ್ಸು ಮಧ್ಯಾಹ್ನ, ಸಂಜೆಗಿಂತ ಬೆಳಗಿನ ವೇಳೆ ಶಾಂತವಾಗಿರುತ್ತದೆ. ಆ ವೇಳೆಯಲ್ಲಿ ಯಾವ ಕೆಲಸ ಕೈಗೆತ್ತಿಕೊಂಡರೂ ಚೆಂದವಾಗಿ ನಡೆಯುತ್ತದೆ. ನಿದ್ದೆಯಿಂದ ಎದ್ದ ಕೆಲ ಕಾಲ, ಬೆಳಗಿನ ವೇಳೆ ಬ್ರಾಹ್ಮೀ ಮುಹೂರ್ತ ಒಳ್ಳೆಯ ಶಾಂತತೆಯ ಕಾಲ. ಆ ವೇಳೆಯನ್ನು ಇನ್ನೂ ವಿಸ್ತಾರ ಮಾಡಿಕೊಳ್ಳಬೇಕು. ಶಾಂತವಾಗಿರುವದನ್ನು ವಿಸ್ತಾರ ಮಾಡಿಕೊಳ್ಳಬೇಕು. ಆ ಸಾಧನೆ ಪ್ರತಿಯೊಬ್ಬರೂ ಸಾಧಿಸಬೇಕು ಎಂದ ಶ್ರೀಗಳು, ಬೆಳಿಗ್ಗೆ ಧರ್ಮರಾಯ, ಮಧ್ಯಾಹ್ನ ಕರ್ಣ, ಸಂಜೆಗೆ ದುಶ್ಯಾಸನ ಎಂದು ಯಾರೋ ಆಡಿದ್ದರು. ಹಾಗೆ ಆಗಬಾರದು. ಶಾಂತ ಸ್ಥಿತಿ ವಿಸ್ತಾರ ಮಾಡಿಕೊಳ್ಳಬೇಕು ಎಂದರು. ನಿರಾಹಾರ ಅಥವಾ ಉಪಹಾಸದ ಕ್ರಮ ನಮ್ಮ ಆಚರಣೆಯಲ್ಲಿದೆ. ಉಪವಾಸದಿಂದ ಮನಸ್ಸಿನ ಏಕಾಗ್ರತೆಗೆ ಅನುಕೂಲ ಇದೆ. ಶಾರೀರಕವಾಗಿ ಕೂಡ ನಿಯಮಿತವಾಗಿ ನಿರಾಹಾರ ಮಾಡುವದರಿಂದ ಶರೀರದ ಕೊಬ್ಬೂ ಕಡಿಮೆ ಆಗುತ್ತದೆ. ಶರೀರಕ್ಕೆ ನಿದ್ದೆ ತಡೆಯುವ ಸಾಮರ್ಥ್ಯ ಕೂಡ ಇರುತ್ತದೆ. ಆಗೀಗೊಮ್ಮೆ ಜಾಗರಣ ಕೂಡ ಬೇಕಾಗುತ್ತದೆ. ಶ್ವಾಸವನ್ನು ಕೆಲ ಸೆಕೆಂಡುಗಳ ಕಾಲ ತಡೆಯುವ ಸಾಮರ್ಥ್ಯವೂ ಇದೆ. ಉಪವಾಸ, ಜಾಗರಣೆ, ಪ್ರಾಣಾಯಾಮ ನಿಯಮಗಳ ಅನುಸರಣೆ ನಿಯಮಿತವಾಗಿ ಎಲ್ಲರೂ ಮಾಡಬೇಕು ಎಂದೂ ಉದಾಹರಣೆ ಸಹಿತ ವಿವರಿಸಿ ಆಲಸ್ಯ, ಅತಿ ನಿದ್ದೆ ಕೂಡ ಒಳ್ಳೆಯದಲ್ಲ. ವಾತ ಪಿತ್ತ ಕಫಗಳ ನಿರ್ವಹಣೆ ಕೂಡ ಆಹಾರ ನಿಯಮಗಳ ಮೂಲಕ ಮಾಡಿಕೊಳ್ಳಬೇಕು ಎಂದರು. ಭೋಗದ ಅತಿ ಆಸೆ ಒಳ್ಳೆಯದಲ್ಲ. ಅವುಗಳನ್ನು ನಿಯಂತ್ರಿಸಬೇಕು. ಧರ್ಮಾಚರಣೆ ಒಳ್ಳೆಯ ಉಪಾಯ. ಇದು ನೆಮ್ಮದಿಯೂ ಹೌದು ಎಂದೂ ಹೇಳಿದರು.
ಈ ವೇಳೆ ಶ್ರೀಪಾದ ಹೆಗಡೆ ಶಿರ್ನಾಲ, ನಾಗೇಂದ್ರ ಭಟ್ಟ ಹಿತ್ಲಳ್ಳಿ, ನಾರಾಯಣ ಹೆಗಡೆ ಭಟ್ರಕೇರಿ, ಗೀತಾ ಹೆಗಡೆ ಶೀಗೇಮನೆ, ಮೃತ್ಯುಂಜಯ ಹೆಗಡೆ ಚಿಪಗೇರಿ, ಸುರೇಶ ಹೆಗಡೆ ಕೋಸುಗುಳಿ ಇತರರು ಇದ್ದರು.