Slide
Slide
Slide
previous arrow
next arrow

ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಬಹುಮುಖ್ಯ: ಪಿಎಸ್‌ಐ ರತ್ನಾ

300x250 AD

ಶಿರಸಿ: ಶ್ರಾವಣ ಮಾಸದ ಅಂಗವಾಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಕಾರ್ಯನಿರ್ವಾಹಕರು, ಹಾಲು ಉತ್ಪಾದಕ ರೈತ ಮಹಿಳೆಯರು ಹಾಗೂ ತಾಲೂಕಿನ ಇತರೇ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧ್ಯಕ್ಷರು, ಮಹಿಳಾ ಆಡಳಿತ ಮಂಡಳಿಯ ಸದಸ್ಯರು ಮಹಿಳಾ ಮುಖ್ಯಕಾರ್ಯನಿರ್ವಾಹಕರುಗಳಿಗೆ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಸೆ.08, ಶುಕ್ರವಾರದಂದು ನಗರದ ಟಿ.ಎಂ.ಎಸ್. ಸಭಾಭವನದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದಂತಹ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಾರದಾಂಬೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತಹ ಶ್ರೀಮತಿ ವೇದಾವತಿ ಹೆಗಡೆ ನೀರ್ನಳ್ಳಿ, ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆಯ ಪಿ.ಎಸ್.ಐ. ರತ್ನಾ ಎಸ್‌ ಕುರಿ, ಹುಲೇಕಲ್‌ ವಿಭಾಗದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಉಷಾ ಕಬ್ಬೇರ ಹಾಗೂ ಸುಮಾ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅರಿಶಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಕುರಿತು ಸುರೇಶ್ಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಅತೀ ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡು ನನ್ನ ತಾಯಿ ಹಾಗೂ ಸಹೋದರಿಯರ ಪ್ರೀತಿ ಹಾಗೂ ಮಮತೆಯಲ್ಲಿಯೇ ಬೆಳೆದು ಬಂದ ನಾನು ಮಾತೆಯರ ಬಗೆಗಿನ ನನ್ನ ಭಾವನೆ ಎಂದೆಂದೂ ಶಾಶ್ವತವಾಗಿದೆ. ಅಧಿಕಾರಕ್ಕೂ ಮೀರಿ ನಮ್ಮ ಈ ಭಾಂದವ್ಯ ಯಾವತ್ತೂ ಶಾಶ್ವತವಾಗಿರಬೇಕು ಎಂಬ ದೃಷ್ಟಿಯ ಸಂಕೇತವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನನ್ನಿಂದ ತಮಗೆ ಗೌರವವನ್ನು ಒದಗಿಸಲು ಇದೊಂದು ಸದಾವಕಾಶವಾಗಿದೆ. ಸದಾ ಹಾಲು ಸಂಘಗಳ ವ್ಯವಹಾರ, ಇತರೇ ಚರ್ಚೆಗಳಿಗಷ್ಟೇ ತಮ್ಮನ್ನು ನೆನಪಸಿಕೊಳ್ಳಾಲಾಗುತ್ತಿದ್ದು, ತಮ್ಮ ನಿಸ್ವಾರ್ಥ ಸೇವೆಗೆ ಅರ್ಥಪೂರ್ಣವಾಗಿ ಗೌರವ ಸೂಚಿಸಲು ಶ್ರಾವಣ ಮಾಸದ ಈ ಶುಭದಿನದಂದು ಅರಿಶಿಣ ಕುಂಕುಮ ಕಾರ್ಯಕ್ರಮದ ಮೂಲಕ ತಮಗೆಲ್ಲ ನನ್ನ ವಿನಮ್ರ ನಮನ ಸಲ್ಲಿಸುತ್ತಿದ್ದೇನೆ ಎಂದರು. ತಮ್ಮೆಲ್ಲರನ್ನು ಈ ಕಾರ್ಯಕ್ರಮದ ಮೂಲಕ ಗೌರವಿಸಿ ತಮ್ಮ ಸಲಹೆ, ಸೂಚನೆ, ಆಶೀರ್ವಾದವನ್ನು ಪಡೆಯುವ ಮೂಲಕ ನನ್ನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳನ್ನು ಸಲ್ಲಿಸಲು ನನಗೆ ಪ್ರೇರಣೆಯಾಗಲಿದೆ ಎಂದರು. ಅತ್ಯಂತ ಕಠಿಣ ಕ್ಷೇತ್ರದಲ್ಲಿ ಸಾಧನೆ ಮಾಡಿ ಸೇವೆ ಸಲ್ಲಿಸುತ್ತಿರುವ ಎರಡು ಜನ ಮಹಿಳಾ ಅಧಿಕಾರಿಗಳನ್ನು ನಾವು ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನಾಗಿ ಆಹ್ವಾನಿಸಿದ್ದೇವೆ, ಅವರಲ್ಲಿ ಒಬ್ಬರು ರಾಜ್ಯ ಪೊಲೀಸ್‌ ಇಲಾಖೆ ಹಾಗೂ ಇನ್ನೊಬ್ಬರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ಈ ಮೂಲಕ ಮಹಿಳೆ ಯಾವುದೇ ಕ್ಷೇತ್ರದಲ್ಲಾದರೂ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆ ಮಾಡಬಲ್ಲಳು ಎಂಬುದಕ್ಕೆ ಸಾಕ್ಷಿಯಾಗಿದೆ. ಪುರಾಣ ಕಾಲದಿಂದಲೂ ಪುರುಷರಿಗಿಂತಲೂ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡಿದೆ. ಇಂದಿಗೂ ನಾವು ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಹೆಣ್ಣನ್ನು ಪೂಜಿಸುವಂತೆ ಗೌರವಿಸುವಂತೆ ಉತ್ತಮ ಸಂಸ್ಕಾರವನ್ನು ನೀಡಬೇಕಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶಿರಸಿಯ ಹೊಸ ಮಾರುಕಟ್ಟೆ ಠಾಣಿಯ ಪೊಲೀಸ್‌ ಉಪ ನೀರಿಕ್ಷರಾದ ರತ್ನಾ ಎಸ್‌ ಕುರಿ ಮಾತನಾಡಿ, ಇಂತಹ ವಿನೂತನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಮಹಿಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಅರಿಶಿಣ ಕುಂಕುಮದಂತಹ ಸುಸಂಸ್ಕೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಮಗುವಿಗೆ ಮೊದಲು ಗುರು ತಾಯಿ. ತಾಯಿಯಾದವಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾಳೆ. ಆದರೆ ಇವತ್ತಿನ ದಿನಗಳಲ್ಲಿ ಪಾಲಕರು ಅದರಲ್ಲೂ ಮುಖ್ಯವಾಗಿ ತಾಯಂದಿರು ಮಕ್ಕಳ ಬಗೆಗೆ ತಮ್ಮ ಗಮನವನ್ನು ಕೊಡದಿರುವುದು ಬೇಸರದ ಸಂಗತಿಯಾಗಿದೆ. ತಾವುಗಳು ತಾಳ್ಮೆಯಿಂದ ಸಮಾಧಾನದಿಂದ ಎಲ್ಲಾ ಸಮಸ್ಯೆಗಳನ್ನು ಎದುರಿಸವಂತಾಗಬೇಕು ಹಾಗೂ ನಿಮ್ಮ ಮಕ್ಕಳ ಬಗೆಗೆ ಹೆಚ್ಚಿನ ಗಮನ ಹಾಗೂ ಕಾಳಜಿಯನ್ನು ವಹಿಸಬೇಕು ಇದರಿಂದ ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಲು ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸುವಂತೆ ಮಾಡಲು ಸಹಾಯಕವಾಗಲಿದೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗಿದ್ದು ಅತಂಹ ತಾಯಂದಿರಾದ ತಾವುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಬೇಕು ಮಕ್ಕಳ ಚಲನವಲನದ ಕುರಿತು ಸದಾ ಗಮನ ಹರಿಸಬೇಕು. ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಓದಲು ನೀಡಿ ಅವನರನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗುವಂತೆ ಮಾಡುವಲ್ಲಿ ಶ್ರಮವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಅಪರಾಧದ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅನೇಕ ಅಪ್ರಾಪ್ತ ವಯಸ್ಸಿನವರು ಅತೀ ಹೆಚ್ಚಿನ ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಆದ್ದರಿಂದ ತಾವುಗಳು ಮನೆಯಲ್ಲಿ ಧಾರವಾಹಿಗಳನ್ನು ವೀಕ್ಷಿಸಲು ನೀಡುತ್ತಿರುವ ಸಮಯವನ್ನು ಮಕ್ಕಳ ಬಗೆಗೆ ಕಾಳಜಿವಹಿಸುವುದರಲ್ಲಿ ನೀಡಿ ಅವರ ಜೊತೆ ವಿದ್ಯಾಭ್ಯಾಸದ ಕುರಿತು, ಸಾಮಾನ್ಯ ಜ್ಞಾನದ ಕುರಿತು, ದಿನ ನಿತ್ಯದ ಆಗುಹೋಗುಗಳ ಕುರಿತು ಚರ್ಚಿಸಿ ಮಕ್ಕಳ ಜೊತೆ ಮಾರ್ಗದರ್ಶಕರಾಗಿ, ಸ್ನೇಹಿತರಾಗಿ, ಹಿತೈಷಿಯಾಗಿ ಉತ್ತಮ ಸಂಬಂಧ ಹೊಂದಿ ಉತ್ತಮ ಸಮಾಜವನ್ನು ರೂಪಿಸುವಂತಾಗಬೇಕು ಎಂದರು.

300x250 AD

ಹುಲೇಕಲ್‌ ವಿಭಾಗದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಉಷಾ ಕಬ್ಬೇರ ಮಾತನಾಡಿ ನಮ್ಮ ನದಿಗಳಿಗೆ ತಾಯಿ ಎಂದು ಪೂಜಿಸುತ್ತೇವೆ. ನೆಲವನ್ನು ಪೃಥ್ವಿ ಎಂದು ಆರಾಧಿಸುತ್ತಿದೇವೆ. ಪ್ರತೀ ಮರಗಳಲ್ಲೂ ದೇವಿಯನ್ನು ಕಾಣುವ ಮಹಾ ಸಂಸ್ಕೃತಿಯವರು ನಾವು. ಎಲ್ಲಿ ಮಹಿಳೆಯರಿಗೆ ಗೌರವ ಮನ್ನಣೆ ಸಿಗಲ್ಪಡುತ್ತದೆಯೋ ಅಲ್ಲಿ ದೇವತೆಗಳು ವಿಹರಿಸುತ್ತಿರುತ್ತಾರೆ ಎಂಬ ಮಾತನ್ನು ನಂಬಿರುವ ಅತ್ಯಂತ ಶ್ರೀಮಂತ ಸಂಸ್ಕೃತಿ ನಮ್ಮದಾಗಿದೆ, ಈಡೀ ಜಗತ್ತನ್ನೇ ನನ್ನ ಕುಟುಂಬ ಎಂದು ಸಾರುವ ನಮ್ಮ ಭಾರತೀಯ ಸಂಸ್ಕೃತಿ ಮಾತ್ರ. ಪುರಾತನ ಕಾಲದಿಂದಲೂ ಮಹಿಳೆಯರನ್ನು ಅತ್ಯಂತ ಪೂಜನೀಯವಾಗಿ ಕಾಣಲ್ಪಡುತ್ತಿದೆ ಅಂದು ಇಂದು ಮುಂದೆದೂ ಭಾರತೀಯ ಸಂಸ್ಕೃತಿ ಮಹಿಳೆಯರನ್ನು ಸದಾ ಪೂಜಿಸುತ್ತದೆ ಮಾತೆಯರನ್ನು ಸದಾ ಆರಾಧಿಸುತ್ತದೆ. ಇಂದಿನ ಜೀವನಶೈಲಿಯಲ್ಲಿ ನಾವು ಪರದೇಶಿಗರಾಗಿ ಜೀವಿಸುತ್ತಾ ಇದ್ದೇವೆ ನಮ್ಮ ಸಂಸ್ಕೃತಿಯನ್ನು ಕ್ರಮೇಣ ನಾವು ಮರೆಯುತ್ತಿದ್ದೇವೆ, ಪೂರ್ವಜರು ಹೇಳಿಕೊಟ್ಟ ಸಂಸ್ಕೃತಿಯ ಪಾಠವನ್ನು ಮರೆತು ಆಧುನೀಕತೆಯ ಗುಂಗಿನಲ್ಲಿ ನಮ್ಮ ಅಸ್ತಿತ್ವನ್ನು ಕಳೆದುಕೊಳ್ಳುತ್ತಿದ್ದೇವೆ. ಈ ದೇಶವೆಂಬ ಮಾತೆಯನ್ನು ಅದರಲ್ಲೂ ನಮ್ಮ ಪ್ರಕೃತಿನ್ನು ಮಾತೆಯ ರೂಪದಲ್ಲಿ ಕಾಣುತ್ತಾ ನಾವು ಪೂಜಿಸುತ್ತಿದ್ದೇವೆ ಎಂದಾದಾಗ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕುಂಠಿತಗೊಳ್ಳುತ್ತಿದೆ ಆದುದರಿಂದ ತಾವುಗಳು ತಮ್ಮ ಮನೆಗಳಲ್ಲಿ ಪ್ರತೀ ವರ್ಷ ಯಾವುದಾದರೂ ಹಣ್ಣು ಬಿಡುವಂತಹ ಹಾಗೂ ಪರಿಸರದ ವಾತಾವರಣವನ್ನು ಕಾಪಾಡುವಂತಹ ಗಿಡಗಳನ್ನು ತಪ್ಪದೇ ನೆಡಬೇಕೆಂದು ಸಭೆಯ ಮೂಲಕ ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ವೇದಾವತಿ ಸೀತಾರಾಮ ಹೆಗಡೆ ನೀರ್ನಳ್ಳಿ, ವಿಶೇಷವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಪ್ರಾರಂಭವಾಗಿ ಈ ವರ್ಷವೂ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ. ಇಲ್ಲಿಯವರೆಗೆ ಯಾರೂ ಸಹ ಇತಂಹ ವಿನೂತನ ಕಾರ್ಯಕ್ರಮನ್ನು ಹಮ್ಮಿಕೊಂಡಿರಲಿಲ್ಲ. ನಮ್ಮೆಲ್ಲರನ್ನು ತಮ್ಮ ಸಹೋದರಿಯರಂತೆ ಪರಿಗಣಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಮಗೆಲ್ಲಾ ಅತ್ಯಂತ ಖುಷಿಯನ್ನು ನೀಡಿದೆ. ಅರಿಶಿಣ ಕುಂಕುಮ ಎಂಬುದು ನಮ್ಮ ಮಾಂಗ್ಯಲದ ಒಂದು ಪವಿತ್ರ ಸಂಕೇತವಾಗಿದ್ದು, ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ. ಹೆಣ್ಣು ಮನೆಯ ಮಗಳಾಗಿ, ಸಹೋದರಿಯಾಗಿ, ಗಂಡನ ಮುದ್ದಿನ ಮಡದಿಯಾಗಿ, ಮನೆಯ ಸೊಸೆಯಾಗಿ, ತಾಯಿಯಾಗಿ ತನ್ನ ಈಡೀ ಜೀವನವನ್ನು ಮುಡಿಪಾಗಿಟ್ಟಿರುತ್ತಾಳೆ. ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಇಂದಿನ ಕಾರ್ಯಕಮಕ್ಕೆ ಆಗಮಿಸಿ ತಾವೆಲ್ಲರನ್ನೂ ನೋಡಿದರೆ ನಮಗೆ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದು ಅರ್ಥವಾಗುತ್ತದೆ. ಹಾಗೆಯೇ ತಾವೆಲ್ಲರೂ ತಮ್ಮ ದಿನನಿತ್ಯದ ಬಿಡುವಿಲ್ಲದ ಮನೆಯ ಕೆಲಸದ ನಡುವೆಯೂ ಈ ಶುಭ ಕಾರ್ಯಕ್ರಮಕ್ಕೆ ಆಗಮಿಸಿರುವುದು ನನಗೆ ಅತ್ಯಂತ ಖುಷಿಯನ್ನು ನೀಡಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್‌.ಬಿಜೂರ್‌, ಸಹಾಯಕ ವ್ಯವಸ್ಥಾಪಕರಾದ ಡಾ.ವಿವೇಕ.ಎಸ್‌.ಆರ್, ವಿಸ್ತರಣಾಧಿಕಾರಿಯಾದ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ಅಭಿಷೇಕ ನಾಯ್ಕ, ಜಯಂತ ಪಟಗಾರ, ಉಪಸ್ಥಿತರಿದ್ದರು. ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಶ್ರೀಮತಿ ಅನಸೂಯಾ ಹೆಗಡೆ, ಮೂಲೇಮನೆ ಹಾಲು ಉತ್ಪಾದಕರ ಮಹಿಳಾ ಸಂಘದ ಶ್ರೀಮತಿ ವಸುಧಾ ಹೆಗಡೆ, ಹುತ್ಗಾರ ಹಾಲು ಉತ್ಪಾದಕರ ಸಹಕಾರ ಸಂಘದ ಶ್ರೀಮತಿ ವಿನೋದಾ ದೇವಾಡಿಗ ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮವಹಿಸಿದರು. ಕಾನಕೊಪ್ಪ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿಯಾದ ಚೇತನಾ ದೇವಾಡಿಗ ನಿರೂಪಣೆ ಮಾಡಿದರು, ತೆರಕನಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಭಟ್‌ ಸ್ವಾಗತಿಸಿದರು, ನರೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top