ಶಿರಸಿ: ನ್ಯಾಯಕ್ಕಾಗಿ ಹೋರಾಡುವ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಇದರಿಂದಾಗಿ ವಕೀಲರು ನಿರ್ಭೀತಿಯಿಂದ ಕೆಲಸ ಮಾಡಲು ಕಷ್ಟವಾಗುತ್ತಿದೆ. ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಶಿರಸಿ ತಾಲೂಕು ವಕೀಲರ ಸಂಘದಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಭಟ್ಕಳದಲ್ಲಿ ವಕೀಲ ಗುರುದಾಸ ಮೊಗೇರ ಕಚೇರಿಯಲ್ಲಿದ್ದಾಗ ಹಲ್ಲೆ ನಡೆಸಿದ್ದಾರೆ. ಅವರು ತಪ್ಪಿಸಿಕೊಳ್ಳು ಯತ್ನ ನಡೆಸಿದರೂ ಹೊರಗಡೆ ಬಂದೂ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ಇಂಥದೇ ಎರಡು ಪ್ರಕರಣಗಳು ನಡೆದಿತ್ತು ಎಂದು ವಕೀಲರು ತಿಳಿಸಿದರು.
ಸರ್ಕಾರ ಈ ಹಿಂದೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವ ಬಗ್ಗೆ ಭರವಸೆ ನೀಡಿತ್ತಾದರೂ ಅದು ಜಾರಿಗೆ ಬಂದಿಲ್ಲ. ಈ ಕಾಯ್ದೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಜಯಪ್ರಕಾಶ ನಾಯಕ, ರಾಜೇಶ ಶೆಟ್ಟಿ, ರಾಘವೇಂದ್ರ ಹೊಸೂರು, ಹರೀಶ ನಾಯಕ, ಬಸವರಾಜ ದೊಡ್ಮನಿ ಇತರರಿದ್ದರು.