ಶಿರಸಿ: ಬಹು ನಿರೀಕ್ಷೆ ಮೂಡಿಸಿದ್ದ ಗ್ರಾಮ ಪಂಚಾಯತದ ಚುನಾವಣಾ ಕಸರತ್ತು ಬಹುತೇಕ ಮುಗಿದಿದ್ದು, ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ನಡುವೆ ನೇರ ಹಣಾಹಣಿ ನಡೆದಿದೆ. ಕೆಲವು ಪಂಚಾಯತಗಳಲ್ಲಂತೂ ರಾಜೀ-ರಾದ್ಧಾಂತಗಳೇ ನಡಿದಿದೆ.
ಆದರೆ ತಾಲೂಕಿನ ಘಟಾನುಘಟಿ ಪಂಚಾಯತ ಎನಿಸಿರುವ ಭೈರುಂಬೆ ಗ್ರಾಮ ಪಂಚಾಯತದ ಚುನಾವಣೆಯ ಫಲಿತಾಂಶ ಮಾತ್ರ ತೀವ್ರ ಕುತೂಹಲ ಮೂಡಿಸಿದ್ದಲ್ಲದೇ, ವ್ಯಕ್ತಿಯೋರ್ವನ ಅಧಿಕಾರದ ಮದವು ಸಂವಿಧಾನದ ಅಡಿಯಲ್ಲಿನ ಪ್ರಜಾಪ್ರಭುತ್ವದ ನೈಜ ಆಶಯಕ್ಕೆ ಧಕ್ಕೆ ತರುವ ಪ್ರಮೇಯ ನಡೆಯಿತೇ ಎನ್ನುವ ಮಾತುಗಳು ಕೇಳಿ ಬರತೊಡಗಿದೆ.
ಭೈರುಂಬೆ ಪಂಚಾಯತದ ಒಟ್ಟೂ 8 ಸ್ಥಾನಗಳಲ್ಲಿ 5 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರಾಗಿದ್ದು, 3 ಸ್ಥಾನಗಳು ಬಿಜೆಪಿ ಬೆಂಬಲಿತ ಸದಸ್ಯರದ್ದಾಗಿತ್ತು. ಕಳೆದ ಅವಧಿಗೆ ಅಧ್ಯಕ್ಷನಾಗಿದ್ದ ರಾಘವೇಂದ್ರ ನಾಯ್ಕ ಬೆಳಲೆ ‘ಹಿಂದುಳಿದ ಅ’ ವರ್ಗದಿಂದ ಪ್ರಸ್ತುತ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ವರ್ಗದಿಂದ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿಗಳು ಇದ್ದರೂ ಸಹ, ಯಾವುದೋ ಕಾಣದ ಕೈಗಳ ಒತ್ತಡದಿಂದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ಮಾತ್ರವಲ್ಲದೇ, ಕಾಂಗ್ರೆಸ್ ಬೆಂಬಲಿತ ಈ ಉಪಾಧ್ಯಕ್ಷ, ತಮ್ಮದೇ ಪಕ್ಷದ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿದ್ದರೂ ಸಹ, ಕಾಣದ ಕೈಗಳ ಒತ್ತಡ ಹೇರಿ, ಆ ಮೂಲಕ ಅಧ್ಯಕ್ಷ ಸ್ಥಾನ ಖಾಲಿ ಇರಿಸುವ ಮೂಲಕ ಉಪಾಧ್ಯಕ್ಷನಾಗಿ ತಾನೇ ಅಧ್ಯಕ್ಷಗಿರಿಯನ್ನು ಚಲಾಯಿಸುವ ಮಟ್ಟಿಗೆ ಅಧಿಕಾರದ ದಾಹ ತಲೆಗೇರಿದೆ. ಆ ಮೂಲಕ ಪಕ್ಷದ ಇತರ ಸದಸ್ಯರನ್ನು ಕಡೆಗಣಿಸಿದ್ದಲ್ಲದೇ, ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿಯೇ ಇಂತಹ ವ್ಯಕ್ತಿಗತ ಸ್ವಾರ್ಥ-ಮಹಿಳಾ ವಿರೋಧಿ ರಾಜಕಾರಣ ನಡೆದಿರುವುದು ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯ ದೃಷ್ಟಿಯಿಂದ ಮಾರಕ ಎಂಬುದು ಸ್ಥಳೀಯ ಜನತೆಯ ಒಟ್ಟಾರೆ ಅಭಿಪ್ರಾಯವಾಗಿದೆ.
ಈ ಘಟನೆಗೆ ಸಂಬಂಧಿಸಿ, ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಮ್ಮದೇ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಈ ಪ್ರಜಾಪ್ರಭುತ್ವ ಮತ್ತು ಮಹಿಳಾ ವಿರೋಧಿ ನಡೆಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದುನೋಡಬೇಕಿದೆ. ಜೊತೆಗೆ ಸ್ಥಳೀಯ ಬಿಜೆಪಿ ಬೆಂಬಲಿತ ಸದಸ್ಯರೂ ಸಹ ಅವಕಾಶವಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.