ಭಟ್ಕಳ: ಸಿಟಿಜನ್ ಕನ್ನಡ, ಸಿಟಿಜನ್ ಇಂಡಿಯಾ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ 18ರಿಂದ 40 ವಯಸ್ಸಿನವರ ಸಿಟಿಜನ್ ಯುವ ಪಾರ್ಲಿಮೆಂಟ್- ಮಾದರಿ ಸಂಸತ್ತು ಕಾರ್ಯಕ್ರಮದಲ್ಲಿ ತಾಲ್ಲೂಕಿನ ತಿರುಮಲ ನಾಯ್ಕ ಸಂಸತ್ತಿನ ಸಭಾಧ್ಯಕ್ಷರಾಗಿ ಆಯ್ಕೆಯಾಗಿ ಅಚ್ಚುಕಟ್ಟಾಗಿ ಸಂಸತ್ತಿನ ಅಧಿವೇಶನವನ್ನ ನಿರ್ವಹಿಸಿ, ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಯುವ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯದಾದ್ಯಂತ ಎಲ್ಲಾ ವಿಶ್ವವಿದ್ಯಾಲಯ, ಐಟಿ ಕಂಪನಿಗಳು, ವೈದ್ಯರು, ವಕೀಲರು, ಉದ್ಯಮಿಗಳು ಹೀಗೆ ಸುಮಾರು 2000ಕ್ಕೂ ಅಧಿಕ ಅರ್ಜಿಗಳನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಿ ಸುಮಾರು 210 ಮಂದಿಯನ್ನ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಅತೀ ಉತ್ತಮ ಪ್ರದರ್ಶನ ನೀಡಿದ 25 ಮಂದಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಪೈಕಿ ತಿರುಮಲ ಒಬ್ಬರಾಗಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಯು ವಿಕಾಸಸೌಧದ ಕೊಠಡಿ ಸಂಖ್ಯೆ 419ರಲ್ಲಿ ಜರುಗಿತ್ತು. ಕಾರ್ಯಕ್ರಮವನ್ನ ಸಚಿವ ಹೆಚ್.ಕೆ.ಪಾಟೀಲ್ ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೀವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂಸದೀಯ ಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.