ಶಿರಸಿ: ನಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ಜಾಗೃತಿಗಳಿಗೆ ಮಠ ಹಾಗೂ ಶಿಷ್ಯ ಎಂಬ ವ್ಯವಸ್ಥೆ ಇದೆ ಎಂದು ಸೋಂದಾ ಸ್ಚರ್ಣವಲ್ಲೀ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಅವರು ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಶಿರಸಿ ಸೀಮಾ ತೆರಕನಳ್ಳಿ ಭಾಗಿ ಹಾಗೂ ಶಿರಸಿ ಸೀಮಾ ತುಂಡು ಗ್ರಾಮದ ಶಿಷ್ಯರು, ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ಮನುಷ್ಯನಿಗೆ ಆಧ್ಯಾತ್ಮಿಕವಾಗಿ ಎಷ್ಟೊ ವಿಷಯ ಗೊತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಹಾಗೇ ಇದ್ದು ಬಿಡುತ್ತವೆ. ಅದು ಹಾಗೇ ಉಳಿಯದೇ ಮತ್ತೆ ಜಾಗೃತಿ ಮಾಡುವ ಮೂಲಕ ಶಿಷ್ಯರ ಜೀವನ ಪಾವನಗೊಳಿಸಲು ಈ ವ್ಯವಸ್ಥೆ ಇದೆ ಎಂದು ವಿವರಿಸಿದರು.
ಎಲ್ಲರಿಗೂ ಅವಕಾಶಗಳಿದ್ದರೂ ಶರೀರವನ್ನು ಹೆಚ್ಚು ನಂಬಿಕೊಳ್ಳುತ್ತೇವೆ. ಶರೀರ ನಂಬಿಕೊಂಡಷ್ಟು ದೇವರನ್ನು ನಂಬಿಕೊಳ್ಳುವದಿಲ್ಲ. ಶರೀರದೊಳಗಿನ ಪರಮಾತ್ಮನ ನಂಬಿಕೊಳ್ಳುವದಿಲ್ಲ. ಹಾಗಾಗಿ ಅನೇಕ ಸಮಸ್ಯೆಗಳಿಂದ ಬದುಕುತ್ತಿದ್ದೇವೆ ಎಂದು ವಿಶ್ಲೇಷಿಸಿದರು.
ಶರೀರಕ್ಕೆ ರೋಗವಿದೆ. ಆದರೆ ಒಳಗಿರುವ ಪರಮಾತ್ಮನಿಗೆ ರೋಗವಿಲ್ಲ. ಶರೀರ ದುಃಖಮಯ. ಒಳಗಿನ ಭಗವಂತ ಆನಂದಮಯ. ಶರೀರಕ್ಕೆ ಮರಣವಿದೆ. ಆದರೆ, ಒಳಗಿರುವ ಪರಮಾತ್ಮನಿಗೆ ಮರಣವಿಲ್ಲ ಹಾಗೂ ಪರಮಾತ್ಮ ಶಾಶ್ವತ. ಇಷ್ಟೆಲ್ಲ ಇದ್ದರೂ, ಅವನು ನಮ್ಮೊಳಗೇ ಇದ್ದರು ಅವನನ್ನು ನಂಬಿಕೊಳ್ಳುವದಿಲ್ಲ ಎಂದರು.
ಭಗವದ್ಗೀತೆಯ 14ನೇ ಅಧ್ಯಾಯದಲ್ಲಿ ಈ ದೇಹದಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದು ಸತ್ವಗುಣ, ರಜೊಗುಣ, ತಮೊ ಗುಣ ಎಂದು ಉಲ್ಲೇಖಿತವಾಗಿದೆ.
ಸತ್ವಗುಣ ಸುಖದ ಆಸೆಯನ್ನೂ, ರಜೋ ಗುಣ ಚಟುವಟಿಕೆ ಆಸೆಯನ್ನೂ, ತಮೊ ಗುಣ ನಿದ್ರೆ ಮತ್ತಿತರ ಸಂಗತಿಯನ್ನು ಕಟ್ಟಿ ಹಾಕುತ್ತದೆ. ಈ ಮೂರು ಸಂಗತಿಗಳು ಕಟ್ಟಿ ಹಾಕುತ್ತವೆ ಹಾಗೂ ಅವು ಇರುವದು ನಮ್ಮ ಮನಸ್ಸಿನಲ್ಲಿ. ಮನಸ್ಸಿನ ಮೂಲಕ ಇವನ್ನು ಕಟ್ಟಿಹಾಕುತ್ತವೆ. ಆಸೆಗಳೆ ಇವುಗಳಿಗೆ ಕಾರಣ ಎಂದು ವಿವರಿಸಿದರು.
ಪ್ರತಿಯೊಬ್ಬರೂ ದೇವರ ನಾಮ ಸ್ಮರಣೆ ಮಾಡಬೇಕು. ಭಜನೆ ನಡೆಸಬೇಕು. ಜೊತೆಗೆ ಯೋಗಾಸನ, ಪ್ರಾಣಾಯಾಮ ಮಾಡಬೇಕು. ಆಗ ಮನೆಯ ವಾತಾವರಣ ಸುಂದರ ಆಗುತ್ತದೆ ಎಂದ ಅವರು, ಮನೆಗೆ ಮೇಲಿನ ಚೆಂದ ಬೇರೆ. ಒಳಗಿನ ಸುಂದರ ಬೇರೆ. ಪ್ರತಿ ಮನೆ ಪ್ರೀತಿ ವಿಶ್ವಾಸ, ಭಾವಗಳ ಮನೆಯಾಗಬೇಕು ಎಂದರು.
ಶಿರಸಿ ಸೀಮೆ ತೆರಕನಳ್ಳಿ ಭಾಗಿ ಅಧ್ಯಕ್ಷ ಗಣಪತಿ ಟಿ.ಹೆಗಡೆ ಹೊಸಬಾಳೆ, ಶಿರಸಿ ಸೀಮೆ ತುಂಡು ಗ್ರಾಮದ ಅಧ್ಯಕ್ಷ ಗೋಪಾಲಕೃಷ್ಣ ರಾ.ಹೆಗಡೆ ಮೆಣಸಿಕೆರಿ ಇತರರು ಇದ್ದರು.