ಭಟ್ಕಳ: ಪಟ್ಟಣದ ಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಗದ್ದುಗೆಗೆ ಆಗಮಿಸಲಿರುವ ದೇವಿ ಭಕ್ತರಿಂದ ಹರಕೆ- ಪೂಜೆ ಸ್ವೀಕರಿಸಲಿದ್ದಾಳೆ.
ಮಣ್ಕುಳಿಯ ವಿಶ್ವಕರ್ಮ ಸಮಾಜದವರಾದ (ದೇವಿ ತವರು ಮನೆ) ಮಾರುತಿ ಆಚಾರ್ಯ ಮನೆಯಲ್ಲಿ ದೇವಿಯ ಮೂರ್ತಿ ಸಿದ್ಧವಾಗಿದ್ದು, ವಿಶೇಷ ಪೂಜೆಯನ್ನು ನಡೆಸಿ ಬುಧವಾರ ಮುಂಜಾನೆ ವೇಳೆಗೆ ಮಾರಿಕಾಂಬಾ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ದೇವಿಯನ್ನ ಕರೆತರಲಾಗುತ್ತದೆ. ಮಂಗಳವಾರದಂದು ರಾತ್ರಿ ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರು ತವರು ಮನೆಯ ವಿಶೇಷ ಪೂಜೆಯನ್ನು ನೆರವೆರಿಸಲಿದ್ದಾರೆ. ಇಲ್ಲಿನ ಮಾರಿಯ ಪೂಜೆಯ ಮೊದಲು ಮಾರಿ ಮೂರ್ತಿ ತಯಾರಕ ಮಾರುತಿ ಆಚಾರಿ ಅವರ ಕುಟುಂಬದ ದೇವರಾದ ಮಹಾಕಾಳಿ ದೇವಸ್ಥಾನದಲ್ಲಿ ಅನುಷ್ಠಾನ ಪೂಜೆಯನ್ನು ನೆರವೇರಿಸಿ, ಆ ಬಳಿಕ ಮಾರಿ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆ ನಡೆಯಲಿದೆ.
ಮಹಾಮಂಗಳಾರತಿ ಪೂಜೆ ನಡೆಸಿ ಬುಧವಾರ ಮುಂಜಾನೆ 5.30ಕ್ಕೆ ಮಾರಿ ದೇವಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀಮಾರಿಕಾಂಬಾ ದೇವಾಲಯಕ್ಕೆ ಸಕಲ ಸಂಭ್ರಮದಿಂದ ಚೆಂಡೆ ವಾದ್ಯ, ನೃತ್ಯ ಕುಣಿತದೊಂದಿಗೆ ಕರೆತರಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾರಿಕಾಂಬಾ ದೇವಿಯ ಎದುರಿಗೆ, ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೌಂಕರ್ಯಗಳನ್ನು ನಡೆಸಲಾಗುತ್ತದೆ. ಆ ಮೂಲಕ ಎರಡು ದಿನಗಳ ಮಾರಿ ಜಾತ್ರಾ ಮಹೋತ್ಸವ ಮಾರಿಗದ್ದುಗೆಯಲ್ಲಿ ಮಾರಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆಗೊಳ್ಳಲಿದೆ.