ಕುಮಟಾ: ರೋಟರಿಯು ವೈದ್ಯರ ದಿನಾಚರಣೆ ನಿಮಿತ್ತ ಭಾರತೀಯ ವೈದ್ಯಕೀಯ ಸಂಘದ ಜೊತೆಗೂಡಿ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕುಮಟಾದಲ್ಲಿ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ರಕ್ತದಾನ ಶ್ರೇಷ್ಠ ದಾನವಾಗಿದ್ದು ಜೀವನದಲ್ಲಿ ಅದು ಇತರರಿಗೆ ಬದುಕುವ ಭರವಸೆಯನ್ನು ನೀಡುತ್ತದೆ. ಸಾರ್ವಜನಿಕರು ಸ್ಯಯಂ ಸ್ಪೂರ್ತಿಯಿಂದ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ. ಅಶ್ವಿನಿ ಶಾನಭಾಗ ಅಭಿಪ್ರಾಯಪಟ್ಟರು.
ಮೊದಲು ರಕ್ತನಿಧಿ ಕೇಂದ್ರದ ಕೊರತೆಯಿಂದ ಜಿಲ್ಲೆಯ ರೋಗಿಗಳಿಗೆ ರಕ್ತಕ್ಕಾಗಿ ಬೇರೆ ಜಿಲ್ಲೆಗಳ ರಕ್ತನಿಧಿ ಕೇಂದ್ರಗಳನ್ನು ಅವಲಂಬಿಸಬೇಕಾಗಿತ್ತು. ಇದನ್ನು ಮನಗಂಡು ರೋಟರಿಯ ಪ್ರಾಯೋಜಕತ್ವದಡಿ ರಕ್ತನಿಧಿ ಸ್ಥಾಪನೆ ಮಾಡಿದ್ದಾರೆ. ರಕ್ತವು ಮನುಕುಲಕ್ಕೆ ಅತ್ಯಂತ ಮಹತ್ವದ ಸಮಾಜ ಸೇವೆಯಾಗಿದೆ. ಅದನ್ನು ರೋಟರಿ ಸಂಸ್ಥೆ ಮುನ್ನಡೆಸಿಕೊಂಡು ಬಂದಿದೆ ಎಂದು ರೋಟರಿ ಅಧ್ಯಕ್ಷ ಎನ್.ಆರ್.ಗಜು ತಿಳಿಸಿದರು.
ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯರ ಸಮಾಜಮುಖಿ ಕಾರ್ಯವನ್ನು ಅವರು ಶ್ಲಾಘಿಸಿದರು. ಪ್ರಾರಂಭದಲ್ಲಿ ಐಎಂಎ ಸಹ ಕಾರ್ಯದರ್ಶಿ ಡಾ.ನಮೃತಾ ನಾಯಕ ಕೆ. ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ವಂದಿಸಿದರು. ರೋಟೇರಿಯನ್ನರಾದ ಡಾ.ನಿತಿಶ್ ಶಾನಭಾಗ, ಡಾ.ನಮೃತಾ ನಾಯಕ, ಶಿಲ್ಪಾ ಜಿನರಾಜ್, ಡಾ.ಸುಮಲತಾ ಪ್ರಣವ್, ಪ್ರಣವ್ ಮಣಕೀಕರ, ಸತೀಶ್ ನಾಯ್ಕ, ರೋಟರಿ ಖಜಾಂಚಿ ಸಂದೀಪ ನಾಯಕ, ಸುಜಾತಾ ಕಾಮತ ಮೊದಲಾದವರು ರಕ್ತದಾನಗೈದರು. ರೋಟರಿ ಪರಿವಾರದ ಸುರೇಶ ಭಟ್, ಅಜಿತ್ ಭಟ್, ಸಂಪ್ರೀತಾ ಭಟ್, ಬ್ಲಡ್ ಬ್ಯಾಂಕ್ ಉದ್ಯೋಗಿಗಳಾದ ಬಾಲಕೃಷ್ಣ ಗಾವಡಿ, ಸರಳಾ ಗೋನ್ಸಾಲ್ವೇಸ್, ಮಮತಾ ಮೇಸ್ತ ಮೊದಲಾದವರು ಸಹಕರಿಸಿದರು.