ಗೋಕರ್ಣ: ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿ ವಿಳಂಬದಿoದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಮಳೆಗಾಲದಲ್ಲಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತ ಗುತ್ತಿಗೆ ಕಂಪನಿಯವರು ತಾತ್ಕಾಲಿಕವಾಗಿ ಪ್ರಯಾಣಿಕರಿಗೆ ಸಂಚರಿಸುವ ಅವಕಾಶ ಕಲ್ಪಿಸಿದ್ದಾರೆ. ಇದರಿಂದಾಗಿ ಜನರು ಬಾರದಿರುವುದರಿಂದ ಮಂಜಗುಣಿ-ಗಂಗಾವಳಿ ನದಿಗೆ ಸಂಪರ್ಕ ಕೊಂಡಿಯಾಗಿದ್ದ ಯಾಂತ್ರಿಕೃತ ಬೋಟ್ ಶನಿವಾರದಿಂದ ಸಂಚಾರ ಸ್ಥಗಿತಗೊಳಿಸಿದೆ.
ಈಗ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮುಂದಿನ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮತ್ತೆ ಸಂಚಾರ ಬಂದ್ ಮಾಡಬೇಕಾದ ಅನಿವಾರ್ಯತೆ ಇದೆ. ಆ ಸಂದರ್ಭದಲ್ಲಿ ಕಂಪನಿಯವರು ಪರ್ಯಾಯ ಬೋಟ್ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕೆ ಕಂಪನಿಯ ಜವಾಬ್ದಾರಿ ಹೊರಬೇಕು. ಪ್ರತಿದಿನ ಇಲ್ಲಿ ನೂರಾರು ಬೈಕ್ ಹಾಗೂ ಸಾವಿರಾರು ಜನರು ಸಂಚರಿಸುತ್ತಿದ್ದರು. ಬಂದರು ಇಲಾಖೆಯಿಂದ ಗುತ್ತಿಗೆ ಪಡೆದ ಬೋಟ್‌ನವರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಜನರಿಗೆ ಸೇತುವೆಯ ಮೇಲೆ ಸಂಚಾರಕ್ಕೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಬೋಟ್ ಮೇಲೆ ಪ್ರಯಾಣಿಕರು ಬರದಿದ್ದರಿಂದಾಗಿ ಇವರು ನಷ್ಟ ಅನುಭವಿಸುವಂತಾಗಿದೆ. ಇಬ್ಬರು ಬೋಟ್ ಕಾರ್ಮಿಕರು, ಇಂಧನ ಸೇರಿ ಸಾಕಷ್ಟು ಖರ್ಚುಗಳು ಇರುವುದರಿಂದ ಬೋಟ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಬೈಕ್ ಮೂಲಕ ತೆರಳುವವರು ಸುಮಾರು 20 ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾಗಿದೆ.
ಕಳೆದ 5 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಜನರು ಬೇಸತ್ತಿದ್ದಾರೆ. ನಿರಂತರವಾಗಿ ಹೋರಾಟ, ಪ್ರತಿಭಟನೆ ನಡೆಸಿದರೂ ಕೂಡ ಇನ್ನುವರೆಗೂ ಸೇತುವೆ ಕೂಡು ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನರ ವಿರೋಧದಿಂದ ಸೇತುವೆ ಮೇಲೆ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಬೈಕ್ ಮೂಲಕ ಸಂಚರಿಸುವವರು ಮಾತ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಂದರು ಇಲಾಖೆಯವರು ಕಂಪನಿಯವರೊoದಿಗೆ ಮಾತನಾಡಿ, ಮತ್ತೆ ಬೋಟ್ ಸಂಚರಿಸುವoತೆ ಮಾಡಬೇಕಾಗಿದೆ.