ಭಟ್ಕಳ: ಕಳೆದ ಮೂರು ದಿನಗಳ ಹಿಂದೆ ಗೋಕಳ್ಳರನ್ನು ಹಿಂಬಾಲಿಸಿಕೊಂಡು ಹೋದ ತಾಲೂಕಿನ ಮೂವರು ಯುವಕ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿ ಹಿಂದು ಸಂಘಟನೆ ಕಾರ್ಯಕರ್ತರು ನಗರ ಠಾಣೆಗೆ ತೆರಳಿ ಡಿವೈಎಸ್ಪಿಯವರನ್ನು ಭೇಟಿಯಾಗಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಹಲ್ಲೆಗೊಳಗಾದ ಯುವಕ ಪ್ರವೀಣ ಮಾತನಾಡಿ, ನನ್ನ ಸ್ನೇಹಿತನ ಮನೆಯಿಂದ ಊಟ ಮಾಡಿಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಹೇಂದ್ರ ಪಿಕಪ್ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಕುಂಟವಾಣಿ ಚೆಕಪೋಸ್ಟ ಬಳಿ ಪೋಲೀಸರಿಗೆ ಮಾಹಿತಿ ನೀಡಿ ಅಲ್ಲಿದ್ದ ನನ್ನ ಸ್ನೇಹಿತರನ್ನು ಕರೆದುಕೊಂಡು ಭಟ್ಕಳದವರೆಗೆ ಹಿಂಬಾಲಿಸಿಕೊಂಡು ಬಂದು ನಂತರ ಮತ್ತೆ ಭಟ್ಕಳ ಪುರಸಭೆ ಸಮೀಪವಿದ್ದ ಪೋಲೀಸರಿಗೂ ಮಾಹಿತಿ ನೀಡಿ ಪೋಲೀಸರು ನಮ್ಮ ಹಿಂದೆ ಬರುತ್ತಾರೆಂದು ತಿಳಿದು ಅಲ್ಲಿಂದ ವಾಹನವನ್ನು ಹಿಂಬಾಲಿಸಿ ಭಟ್ಕಳದ ಮಾರುಕಟ್ಟೆಯೊಳಗೆ ಹೋದ ನಮಗೆ ಹಲವಾರು ಮಂದಿಯ ಗುಂಪೊಂದು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂವರ ಮೇಲೆ ಹಲ್ಲೆ ನಡೆದ ವೇಳೆ ಪೋಲೀಸರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ವೈದ್ಯಕೀಯ ಪರೀಕ್ಷೆ ಮಾಡಿ ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಅದೇ ಹಿಂದುಗಳು ಬಂಧಿಸುವ ವಿಚಾರದಲ್ಲಿ ಪೋಲೀಸರು ಬಹಳ ಉತ್ಸಾಹದಿಂದ ಬಂಧಿಸುತ್ತಾರೆ. ಅದೇ ಅನ್ಯಕೋಮಿನವರನ್ನು ಬಂಧಿಸುವಲ್ಲಿ ಬಹಳ ನಿಷ್ಕಾಳಜಿ ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತ ವಿಶ್ವನಾಥ ಆರೋಪಿಸಿದರು.
ಇನ್ನೋರ್ವ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಹನುಮಾನ ನಗರ, ಕಳೆದ ಮೂರು ದಿನಗಳ ಹಿಂದೆ ಭಟ್ಕಳ ಕುಂಟವಾಣಿ ಚೆಕಪೋಸ್ಟ ಬಳಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಆ ಭಾಗದ ಯುವಕರು ಅದನ್ನು ಹಿಂಬಾಲಿಸಿಕೊಂಡು ಭಟ್ಕಳದ ಕಲೀಫಾ ಸ್ಟ್ರೀಟ್ ಬಳಿ ಅಡ್ಡಗಟ್ಟಿದ ವೇಳೆ ಅಲ್ಲಿದ್ದ ಹಲವಾರು ಮಂದಿ ಯುವಕರು ಕುತ್ತಿಗೆ ಹಾಗೂ ಕಣ್ಣಿನ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಆದರೆ ಭಟ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಪೊಲೀಸರು ಅಪಘಾತ ಪ್ರಕರಣ ಎಂದು ದಾಖಲಿಸಿದ್ದಾರೆ. ಆದರೆ ಹಲ್ಲೆಗೊಳಗಾದ ಯುವಕರು 50ರಿಂದ 60 ಮಂದಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೋಲೀಸರು ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹ ಮಾಡಿದರು.
ಈ ವೇಳೆ ಡಿವೈಎಸ್ಪಿ, ಮೂರು ದಿನದೊಳಗಾಗಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಆದರೆ ಮೂರು ದಿನದೊಳಗಾಗಿ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ ಹಲ್ಲೆಗೊಳಗಾದ ಚಂದ್ರಶೇಖರ ನಾಯ್ಕ, ಸಂತೋಷ ನಾಯ್ಕ, ವಿಶ್ವ ನಾಯ್ಕ, ಕುಮಾರ ನಾಯ್ಕ, ಪಾಂಡು ಗೊಂಡ, ಚಿದು ಗೊಂಡ, ರಾಜೇಶ ಗುಳ್ಳಿ, ತುಳಸಿದಾಸ, ಯೋಗೇಶ ನಾಯ್ಕ, ದಾಸ ನಾಯ್ಕ ಮೂಢ ಶಿರಾಲಿ, ವಿಷ್ಣು ನಾಯ್ಕ ಹಾಗೂ ಮುಂತಾದ ಹಿಂದೂ ಕಾರ್ಯಕರ್ತರು ಇದ್ದರು.