ಮುಂಡಗೋಡು: ಯಾವ ವ್ಯಕ್ತಿ ಸದಾ ಯಾವುದಾದರೂ ಚಟುವಟಿಕೆಗಳಿಂದ ಕ್ರಿಯಾಶೀಲನಾಗಿರುತ್ತಾನೋ ಆತನನ್ನು ಸಮಾಜ ಗುರುತಿಸುತ್ತದೆ, ಆತನೇ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯ ಮಾಡುವ ಸಮಾಜದ ಮುಂದಾಳು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವಾ ಕಾರ್ಯದಿಂದ ಮಾತ್ರ ಸಾಧ್ಯ ಯುಥ್ ಫಾರ್ ಸೇವಾ ಕಳೆದ ಒಂದುವರೆ ದಶಕದಿಂದ ಈ ರೀತಿ ಸೇವಾ ಕಾರ್ಯ ಮಾಡಿಕೊಂಡು ಬರುತ್ತಿದೆ ಎಂದು ಯುಥ್ ಫಾರ್ ಸೇವಾ ಪರಿಸರ ವಿಭಾಗದ ರಾಜ್ಯ ಸಂಯೋಜಕ ಉಮಾಪತಿ ಭಟ್ಟ್ ಹೇಳಿದರು.
ಅವರು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಂಸ್ಥೆ ಬೆಂಗಳೂರು ಯೂತ್ ಫಾರ್ ಸೇವಾ ಬೆಂಗಳೂರು ಇವರ ಆಶ್ರಯದಲ್ಲಿ ತಾಲೂಕಿನ ಟೆಂಕಲ್ ಉಮಚಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡಿ ಮಾತನಾಡುತ್ತಾ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಮ್ಮ ಹಿರಿಯರು ಸೇವಾ ಕಾರ್ಯದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಸಾಮರಸ್ಯಯುತ ಸಂಘಟಿತ ಸಮಾಜ ನಿರ್ಮಾಣಕ್ಕೆ , ವ್ಯಕ್ತಿತ್ವ ವಿಕಸನಕ್ಕಾಗಿ ಸೇವಾ ಕಾರ್ಯ ಇಂದು ಅಗತ್ಯವಾಗಿದೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸೇವಾಕಾರ್ಯ ಆಂದೋಲನ ರೂಪದಲ್ಲಿ ಬೆಳೆಯಬೇಕಾಗಿದೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಕಾರ್ಯವೇ ಸೇವೆ. ಯುಥ್ ಫಾರ್ ಸೇವಾ ಶಿಕ್ಷಣ , ಪರಿಸರ, ಆರೋಗ್ಯ ಸ್ವಾವಲಂಬನ ಕ್ಷೇತ್ರದಲ್ಲಿ ಸೇವಾ ಕಾರ್ಯ ಮಾಡುತ್ತಿದೆ ಎಂದರು.
ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಂಸ್ಥೆಯ ಉದ್ಯೋಗಿಗಳಾದ ರಾಜು ಗನಿಯನ್, ಕಪಿಲ್, ಶ್ರವಣ ಅವರುಗಳು ಮಾತನಾಡಿ ನಮ್ಮ ಸಂಸ್ಥೆಯು ಬ್ಯಾಕ್ ಟು ಸ್ಕೂಲ್ ಯೋಜನೆಯಡಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ ವಿತರಣೆ ಮಾಡುತ್ತಿದ್ದೇವೆ. ಸೌಲಭ್ಯ ವಂಚಿತ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಮಕ್ಕಳ ಮುಖದಲ್ಲಿ ನಗು ತುಂಬಿರ ಬೇಕು ಎಂಬ ಉದ್ದೇಶದಿಂದ ಪಾಠೋಪಕರಣ, ಪೀಠೋಪಕರಣ ಒದಗಿಸುವ ಸೇವಾ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ ಗೌಡ, ಸದಸ್ಯ ಸತೀಶ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ.ಬಿ.ಎಮ್, ರೇಖಾ ಹೆಗಡೆ, ಹಾಗೂ ಪಾಲಕರು ಪಾಲ್ಗೊಂಡಿದ್ದರು. ಮಕ್ಕಳು ಪ್ರಾರ್ಥಿಸಿದರು, ಮುಖ್ಯಾಧ್ಯಾಪಕ ನಾರಾಯಣ ಶೇರುಗಾರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ
ಅನುಪಮಾ ಡಿ ವಂದಿಸಿದರು.