ದಾಂಡೇಲಿ: ಮನೆಯಲ್ಲಿ ಸಿಗುವಂತಹ ಯೋಗ್ಯ ಸಂಸ್ಕಾರವೆ ಮಗುವಿನ ಶೈಕ್ಷಣಿಕ ಉನ್ನತಿಗೆ ಬಹುಮೂಲ್ಯ ಪ್ರೇರಣೆಯಾಗಲಿದೆ. ಶಿಕ್ಷಣವನ್ನು ಶಾಲೆಗಳ ಮೂಲಕ ನೀಡಿದರೇ, ಸಂಸ್ಕಾರ ಮಗುವಿನ ಮನೆಯಿಂದಲೆ ಬರಬೇಕು. ಹಾಗಾದಾಗ ಮಾತ್ರ ಮಗು ಶೈಕ್ಷಣಿಕವಾಗಿ ಉತ್ತಮವಾಗಿ ಸಾಧನೆ ಮಾಡಲು ಸಾಧ್ಯ ಎಂದು ಗರ್ಡೋಳ್ಳಿ ಚರ್ಚಿನ ಧರ್ಮಗುರು ಫಾ.ರೋನಾಲ್ಡ್ ಡಿಸೋಜಾ ಹೇಳಿದರು.
ಅವರು ನಗರದ ಸೆಂಟ್ ಮೇಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳ ಪಾಲಕರಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೆ ಪಾಲಕರ ಜವಾಬ್ದಾರಿಯಲ್ಲ. ಶಾಲೆಯಲ್ಲಿ ಕಲಿಸಿದ ಪಾಠಗಳನ್ನು ಮಕ್ಕಳಲ್ಲಿ ಕೇಳಿ ತಿಳಿದು ಅವರನ್ನು ಅಭ್ಯಾಸಕ್ಕೆ ಒಳಪಡಿಸುವುದು ಪಾಲಕರ ಮುಖ್ಯ ಕರ್ತವ್ಯವಾಗಿದೆ. ಮಕ್ಕಳ ಶಿಕ್ಷಣದ ಉನ್ನತಿಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ ಎಂದರು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಕ್ಲಾರೆಟ್, ಶಾಲೆಯ ಅಧೀಕ್ಷಕಿ ಸಿಸ್ಟರ್ ವೀಣಾ, ಮುಖ್ಯ ಶಿಕ್ಷಕಿ ವಿನೀತಾ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಜೂಲಿಯಾನ ಅವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ಶಿಕ್ಷಕ ಸೀತಾರಾಮ ನಾಯ್ಕ ಕರ‍್ಯಕ್ರಮ ನಿರೂಪಿಸಿ, ವಂದಿಸಿದರು. ಕರ‍್ಯಗಾರದಲ್ಲಿ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.