ಯಲ್ಲಾಪುರ: ಕ್ಷೇತ್ರದಲ್ಲಿ ವರ್ಗಾವಣೆಯ ನೆಪದಲ್ಲಿ ಅಧಿಕಾರಿಗಳು ಜನರಿಗೆ ತೊಂದರೆ ನೀಡುವುದಾಗಲಿ, ವಸೂಲಿಗಿಳಿಯುವುದಾಗಲಿ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ.
ಮುಂಡಗೋಡ ಮತ್ತು ಯಲ್ಲಾಪುರದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಸೋತ ಅಭ್ಯರ್ಥಿಯ ಬೆಂಬಲಿಗರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸೋತವರ ಸರಕಾರ ಅಧಿಕಾರಕ್ಕೆ ಬಂದಿದ್ದು, ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಭಾವಿಸಿದಂತಿದೆ. ಆದರೆ ನಾನು ಯಾವ ಕಾರಣಕ್ಕೂ ನನ್ನ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಕೇವಲ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತೇನೆ. ನಾಲ್ಕನೇ ಬಾರಿ ಶಾಸಕನಾಗಿದ್ದು, ಪ್ರೋಟೋಕಾಲ್‌ನ ಅರಿವಿದೆ. ಪ್ರೋಟೋಕಾಲ್ ಆಧಾರದ ಮೇಲೆಯೇ ಕೆಲಸ ಮಾಡುತ್ತೇನೆ. ಯಾರೇ ಅಡ್ಡಗಾಲು ಹಾಕಿದರೂ ಅಭಿವೃದ್ಧಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಅಧಿಕಾರಿಗಳು ಬೇರೆಡೆ ಹೋಗುತ್ತಿಲ್ಲ. ಆದರೆ ಇಲ್ಲಿ ಇರಬಯಸುವ ಪ್ರಾಮಾಣಿಕರಲ್ಲೂ ಹಣ ಕೇಳುತ್ತಿರುವ ಕುರಿತು ಅನೇಕ ಅಧಿಕಾರಿಗಳು ನನ್ನಲ್ಲಿ ಹೇಳಿಕೊಂಡಿದ್ದಾರೆ. ಪರಾಜಿತ ಅಭ್ಯರ್ಥಿ ಹಾಗೂ ಬೆಂಬಲಿಗರು ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದರಿOದ ಕೆಲವು ದಿನ ಮೆರೆಯುತ್ತಾರೆ. ನಾನು ವಿರೋಧ ಪಕ್ಷದ ಶಾಸಕನಾಗಿ ಹಾಲಿ ಸರ್ಕಾರದ ಮುಂದೆ ನನ್ನ ವೈಯಕ್ತಿಕ ಬೇಡಿಕೆಗಳನ್ನೇನೂ ಇಡಲಿಲ್ಲ. ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾತ್ರ ನನ್ನ ಬೇಡಿಕೆ ಇದೆ. ಈಗಿನ ಸರಕಾರದಲ್ಲೂ ಅನೇಕ ಮಿತ್ರರು ಮಂತ್ರಿಗಳಾಗಿದ್ದಾರೆ. ಹಾಗಾಗಿ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುವುದು ನನಗೆ ಗೊತ್ತು. ಕ್ಷೇತ್ರದ ಯಾವುದೇ ಅಧಿಕಾರಿಗಳು ಮಾತು ಕೇಳುವುದಿಲ್ಲವೆಂದರೆ ನಾನು ಸುಮ್ಮನೇ ಬಿಡುವುದಿಲ್ಲ. ಶಾಸಕನಾಗಿ ಸಂವಿಧಾನ ನನಗೆ ನೀಡಿದ ಹಕ್ಕನ್ನು ಯಾರೂ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದರು.
ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಯಾವ ಅಧಿಕಾರಿಯನ್ನೂ ಹಣ ಪಡೆದು ಇಲ್ಲಿ ತರಲಿಲ್ಲ. ಅಧಿಕಾರಿಗಳು ಕೆಲಸ ಮಾಡುವ ಮಾನದಂಡವನ್ನೇ ಅರ್ಹತೆಯನ್ನಾಗಿ ಪರಿಗಣಿಸಿ ತಂದಿದ್ದೇನೆ. ಆದರೆ ಸೋತವರು ತಮ್ಮ ಪಕ್ಷ ಅಧಿಕಾರದಲ್ಲಿದೆ ಎಂದು ಅಧಿಕಾರಿಗಳ ಶೋಷಣೆಗಿಳಿದು, ಅಧಿಕಾರಿಗಳು ತಾವು ಹಫ್ತಾ ನೀಡಲು ಅಥವಾ ವರ್ಗಾವಣೆಗೆ ಹಣ ಹೊಂದಿಸಲು ಜನರ ಶೋಷಣೆಗಿಳಿದಿದ್ದು ಕಂಡುಬ0ದರೆ ಸುಮ್ಮನಿರುವುದಿಲ್ಲ ಎಂದು ತಿಳಿಸಿದ್ದಾರೆ.