ಸಿದ್ದಾಪುರ: ಯಾವುದೇ ಜ್ಞಾನ ಶಿಸ್ತುಗಳು ಸಾಕಾರಗೊಳ್ಳುವುದೇ ಸಮಾಜದಲ್ಲಿ. ಸಮಾಜದ ನಿರ್ವಾತದಲ್ಲಿ ತರಗತಿ ಕೋಣೆಯೊಳಗೆ ಕಲಿತ ಜ್ಞಾನದ ಸಿದ್ದಾಂತವು ಅರಳುವುದಿಲ್ಲ. ಸಮಾಜದ ಅನುಭವಸ್ಥರೊಂದಿಗೆ ವಿದ್ಯಾರ್ಥಿಗಳು ಬೆರೆತಾಗ ಸಮಸ್ಯೆಗಳ ತಳಸ್ಪರ್ಶಿ ಮಾಹಿತಿ ದೊರಕುತ್ತದೆ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು.
ಅವರು ತಾಲೂಕಿನ ಅವರಗುಪ್ಪಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯ ಸಿದ್ದಾಪುರ ಇಲ್ಲಿಯ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಸಮಾಜ ಸೇವೆಯನ್ನು ಮಾಡಿ, ಗ್ರಾಮ ಉದ್ದಾರದಲ್ಲಿ ಹೆಗೆಲೆಣೆಯಾಗಲೇ ಬೇಕು. ಆ ಮೂಲಕ ಎನ್.ಎಸ್.ಎಸ್. ಧ್ಯೇಯವನ್ನು ಸಾಕಾರಗೊಳಿಸಬೇಕು. ನಿಮ್ಮ ಬದುಕಿನ ಧನಾತ್ಮಕ ಬದಲಾವಣೆಯಲ್ಲಿ ಈ ಶಿಬಿರ ಒಂದು ವೇದಿಕೆಯಾಗಲಿ. ನಿಮ್ಮ ಸಮಾಜಮುಖಿ ಕಾರ್ಯಗಳಿಂದ ಶಿಬಿರ ಯಶಸ್ವಿಯಾಗಲಿ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಜಯಂತಿ ಶಾನಭಾಗ್‌ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಎ.ಆರ್. ತಿಲಕಕುಮಾರ, ಎಸ್.ಡಿ.ಎಂ.ಸಿ. ಅವರಗುಪ್ಪ ಇದರ ಅಧ್ಯಕ್ಷರಾದ ಸತೀಶ್ ಗೌಡರ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ. ದೇವನಾಂಪ್ರಿಯ ಎಂ. ಇವರು ಪ್ರಾಸ್ತಾವಿಕ ಮಾತನಾಡಿದರು. ಆಶಿತಾ ಗೌಡರ್ ನಿರ್ವಹಿಸಿದರು. ಎನ್.ಎಸ್.ಎಸ್. ಘಟಕದ ನಾಯಕನಾದ ಸಾಯಿಕುಮಾರ ನಾಯ್ಕ ವಂದಿಸಿದರು. ಪ್ರೀತಿ ಗೌಡರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಗತಿ ಕೆ.ಯು. ಮತ್ತು ಸಂಗಡಿಗರು ಎನ್.ಎಸ್.ಎಸ್. ಗೀತೆ ಹಾಡಿದರು.