ದಾಂಡೇಲಿ:ಜಗತ್ತಿನ ಪ್ರತಿಯೊಂದು ಜೀವಿಯು ಪರಿಸರವನ್ನು ಅವಲಂಬಿಸಿಕೊಂಡಿದೆ. ಪರಿಸರವಿದ್ದರೆ ನಾವು ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಪರಿಸರದ ಬಗ್ಗೆ ಕಾಳಜಿ, ಗೌರವವಿದ್ದಲ್ಲಿ ಪರಿಸರ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ತಾಂತ್ರಿಕಾ ವಿಭಾಗದ ಹಿರಿಯ ಉಪಾಧ್ಯಕ್ಷ ಅನೂಜ್‌ಕುಮಾರ್ ದಯಾಳ್ ಹೇಳಿದರು.
ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಕಾರ್ಖಾನೆಯ ಎಚ್.ಆರ್.ಡಿ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಬುಧವಾರ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ರವಿ ಗೌತಮ್ ಮಾತನಾಡಿ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನದ ಭಾಗವಾಗಬೇಕೆಂದರು.
ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ನಿರ್ವಹಣಾ ವಿಭಾಗದ ಉಪಾಧ್ಯಕ್ಷರಾದ ಚಂದ್ರೇಶ್ ಗುಪ್ತಾ ಪರಿಸರ ಸಂರಕ್ಷಣೆಯ ಅಗತ್ಯತೆಗಳ ಬಗ್ಗೆ ವಿವರಿಸಿದರು. ಕಾಗದ ಕಾರ್ಖಾನೆಯ ಅಧಿಕಾರಿಗಳಾದ ಮನೋರಂಜನ್ ಪತಿಯವರು ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ರಮೇಶ್.ಎನ್.ವಂದಿಸಿದರು. ನಾರಾಯಣ ಕರಗುದ್ರಿ ಕಾರ‍್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ಕಾಗದ ಕಾರ್ಖಾನೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.