• Slide
  Slide
  Slide
  previous arrow
  next arrow
 • ಟಿಆರ್‌ಸಿ ವಾರ್ಷಿಕ ಸಭೆ: ರೂ.1.19 ಕೋಟಿ ಲಾಭ: ಹಿರಿಯ ಸದಸ್ಯರಿಗೆ ಸನ್ಮಾನ

  300x250 AD

  ಶಿರಸಿ: ಅಡಿಕೆ ಬೆಳೆಗಾರರ ಸಂಕಷ್ಟ ನಿವಾರಿಸಲು ಹಾಗೂ ಕೃಷಿಕರ ಆಶೋತ್ತರಗಳನ್ನು ಈಡೇರಿಸಲು ಪರಸ್ಪರತೆಯ ಭಾವನೆಯಿಂದ ಜನ್ಮತಾಳಿದ ನಮ್ಮ ಸಂಘವು ಸಹಕಾರ ವ್ಯವಸ್ಥೆಯಲ್ಲಿ ಶತಮಾನಗಳನ್ನು ಪೂರೈಸಿ, ಶತಮಾನೋತ್ತರ ಕಾಲಘಟ್ಟದಲ್ಲಿ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ. ಸಂಘದ ಪ್ರಾರಂಭ ಕಾಲದಿಂದ ಇಂದಿನವರೆಗೂ ಸಂಘದೊಂದಿಗೆ ವ್ಯವಹರಿಸಿದ ಸದಸ್ಯರು ಹಾಗೂ ಬದ್ಧತೆಯಿಂದ ಸಂಘವನ್ನು ಬೆಳೆಸಿಕೊಂಡು ಬಂದ ಎಲ್ಲಾ ಗೌರವಾನ್ವಿತ ಸಹಕಾರಿಗಳು ಸಂಘದ ಇಂದಿನ ಪ್ರಗತಿಗೆ ಕಾರಣರಾಗಿದ್ದಾರೆಂದು ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಹೇಳಿದರು.


  ಅವರು ಶನಿವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆದ 110ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಕಳೆದ 20 ವರ್ಷಗಳಲ್ಲಿ ಸಂಘವು ಗಮನಾರ್ಹ ಪ್ರಗತಿ ಸಾಧಿಸಿದೆ. ಸರ್ಕಾರದ ಸೌಲಭ್ಯಗಳನ್ನು ಕೃಷಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸದಸ್ಯರ ಬೇಕು-ಬೇಡಗಳಿಗೆ ಸಂಘವು ಸ್ಪಂದಿಸಿ ಆಧುನಿಕ ಕಾರ್ಯ ವ್ಯವಸ್ಥೆಯ ಮೂಲಕವಾಗಿ ಗರಿಷ್ಟ ಸೇವೆಗಳನ್ನು ಒದಗಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಸಂಘವು 2022-23ನೇ ಸಾಲಿನಲ್ಲಿ ಎಲ್ಲಾ ವಿಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ರೂ.1,19,64,608 ನಿಕ್ಕೀ ಲಾಭಗಳಿಸಿದೆ. ಸದಸ್ಯರು ಸಂಘದೊಂದಿಗೆ ಈಗಿರುವಂತೆಯೇ ಅನ್ಯೋನ್ಯತೆ ಇಟ್ಟುಕೊಂಡು, ಮುಂಬರುವ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚಿನ ಅಭಿವೃಧ್ಧಿಯ ಕಾರ್ಯವನ್ನು ತಮ್ಮ ಹಿತದೃಷ್ಟಿಯಿಂದ ಕೈಗೊಳ್ಳಲು ಸಹಾಯ-ಸಹಕಾರ ನೀಡಬೇಕು. ಸಂಘದ ಸದಸ್ಯರ ಹಿತದೃಷ್ಟಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಾದ ನಾವು ಸದಾ ಬದ್ಧರಿದ್ದೇವೆ ಎಂದರು.

  ಪ್ರಸಕ್ತ ವರ್ಷದಲ್ಲಿ ರೂ.32 ಕೋಟಿಗೂ ಮಿಗಿಲಾಗಿ ಬೆಳೆಸಾಲವನ್ನು ಹಾಗೂ ರೂ.25 ಕೋಟಿಗೂ ಹೆಚ್ಚಿನ ಕೃಷಿ ಮಾಧ್ಯಮಿಕ ಸಾಲಗಳನ್ನು ಸದಸ್ಯರಿಗೆ ಸಂಘದಿಂದ ನೀಡಲಾಗಿದೆ. 2018ರಲ್ಲಿ ಘೋಷಣೆಯಾದ ರೂ. 1 ಲಕ್ಷದ ವರೆಗಿನ ಬೆಳೆಸಾಲಮನ್ನಾ ಹಣ ಇನ್ನೂ ಅನೇಕ ಸದಸ್ಯರಿಗೆ ಜಮಾ ಆಗಿರುವುದಿಲ್ಲ. ಈಗಾಗಲೇ ಗ್ರೀನ್ ಲೀಸ್ಟ್ಗೆ ಬಂದ ಅರ್ಹ ಸದಸ್ಯರಿಗೆ ಮನ್ನಾ ಸೌಲಭ್ಯ ದೊರಕುವಂತೆ ಪ್ರಯತ್ನಿಸಲು ಧಾರವಾಢ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಚಾಲನೆಯೂ ದೊರಕಿದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ಮನ್ನಾ ಹಣ ದೊರಕುವ ವಿಶ್ವಾಸವಿದೆ ಎಂದರು.

  ರೈತ ಉತ್ಪಾದಕ ಕಂಪನಿ: ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಉಪಯೋಗವಾಗುವಂತಹ ಹಾಗೂ ಅವರ ಆದಾಯವನ್ನು ಹೆಚ್ಚಿಸಿ, ಕೃಷಿಯನ್ನು ಸುಸ್ಥಿರಗೊಳಿಸುವ ಮತ್ತು ಕೃಷಿಯನ್ನು ಯಾಂತ್ರೀಕರಣ ಗೊಳಿಸುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತ ಉತ್ಪಾದಕ ಸಂಸ್ಥೆಯನ್ನು ತೋಟಗಾರ್ಸ್ ಗ್ರೀನ್ ಗ್ರೂಪ್ ಫಾಮರ‍್ಸ್ ಪ್ರೊಡ್ಯೂಸರ್ ಕಂಪನಿ ಹೆಸರಿನಲ್ಲಿ ಟಿಆರ್‌ಸಿ ಪ್ರೇರಣೆಯಿಂದ ಸ್ಥಾಪಿಸಲಾಗಿದೆ. ಈಗಾಗಲೇ ಈ ಸಂಸ್ಥೆ ದೋಟಿಯಲ್ಲಿ ಅಡಿಕೆಗೆ ಮದ್ದು ಸಿಂಪಡಣೆ, ಕೂಲಿ ಕಾರ್ಮಿಕರ ಒದಗಿಸುವಿಕೆ ಹಾಗೂ ರಸಮೇವು ಒದಗಿಸುವ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸೇವೆಗಳನ್ನು ಈ ಕಂಪನಿಯ ಮೂಲಕ ಒದಗಿಸಲಾಗುತ್ತದೆ. ಹೆಚ್ಚಿನ ಸದಸ್ಯರು ಈ ಸಂಸ್ಥೆಯ ಶೇರು ಸದಸ್ಯತ್ವ ಪಡೆದು ಪ್ರಯೋಜನ ಪಡೆದುಕೊಳ್ಳಬೇಕು ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

  ಸಂಘದ ಉಪಾಧ್ಯಕ್ಷರಾದ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಎಲ್ಲ ನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರಾದ ಸತೀಶ ಹೆಗಡೆ, ಶಿರಸಿ ವೇದಿಕೆಯಲ್ಲಿದ್ದರು.

  300x250 AD

  ದಿವಂಗತ ಶ್ರೀಪಾದ ಹೆಗಡೆ ಕಡವೆ ಅವರ ಸ್ಮರಣಾರ್ಥ ಹಾಗೂ ಸಂಘದಲ್ಲಿ 1957 ರಿಂದ 1992ರ ವರೆಗೆ ಮುಖ್ಯಕಾರ್ಯನಿರ್ವಾಹಕರಾಗಿದ್ದ ರಾಮಚಂದ್ರ ಗಣಪತಿ ಅಕದಾಸ ಮತ್ತು 1970 ರಿಂದ 1993ರವರೆಗೆ ನಿರ್ದೇಶಕರಾಗಿದ್ದ ತ್ರಯಂಬಕ ದೇವೇಂದ್ರ ಹೆಗಡೆ ಜಾಲೀಮನೆ ಅವರು ನಿಧನರಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು.

  ಸಂಘದ ಮಹಿಳಾ ಸಿಬ್ಬಂದಿ ಪ್ರಾರ್ಥಿಸಿದರು. ಮುಖ್ಯ ಕಾರ್ಯ ನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ, ಹಾಗೂ ಇನ್ಸ್ಪೆಕ್ಟರ್ ಕಿರಣ ಭಟ್ ಮಾವಿನಕೊಪ್ಪ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ. ಹೆಗಡೆ, ಕುರುವಣಿಗೆ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ವಿ.ಜಿ. ಹೆಗಡೆ ಸೋಮ್ನಳ್ಳಿ ವಂದಿಸಿದರು.

  ನೂತನ ಶಾಸಕರಿಗೆ ಸನ್ಮಾನ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಟಿಆರ್‌ಸಿಯ ಸದಸ್ಯರೂ ಆಗಿರುವ ಭೀಮಣ್ಣ ನಾಯ್ಕ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಣ್ಣ ನಾಯ್ಕ ಅವರು ಸಹಕಾರಿ ಸಂಘಗಳು ನಮ್ಮ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿವೆ. ರಾಮಕೃಷ್ಣ ಹೆಗಡೆ ಕಡವೆ ಅವರ ನೇತೃತ್ವದಲ್ಲಿ ಟಿಆರ್‌ಸಿಯು ರೈತರಿಗೆ ಆರ್ಥಿಕ ಶಕ್ತಿ ತುಂಬುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಹೆಚ್ಚಿಸಿದೆ. ಸಂಸ್ಥೆ ರೈತರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವಂತಾಗಲಿ. ಟಿಆರ್‌ಸಿಯ ಸದಸ್ಯನಾಗಿ, ಈ ಭಾಗದ ಶಾಸಕನಾಗಿ ಸರಕಾರದಿಂದ ದೊರಕುವಂತ ಎಲ್ಲಾ ರೀತಿಯ ಸೌಲಭ್ಯಗಳನ್ನು ಕ್ಷೇತ್ರಕ್ಕೆ ಒದಗಿಸಲು ಪ್ರಯತ್ನಿಸುತ್ತೇನೆ. ನಾನು ಹಿಂದೆ ಹೇಗಿದ್ದೆನೋ ಅದೇ ರೀತಿ ಮುಂದೆಯೂ ಇರುತ್ತೇನೆ ಎಂದರು.

  ಇದೇ ಸಂದರ್ಭದಲ್ಲಿ ಸಂಘದ ಹನ್ನೊಂದು ಹಿರಿಯ ಸದಸ್ಯರಿಗೆ ‘ಉತ್ತಮ ಸದಸ್ಯ’ ಹಾಗೂ ಇಬ್ಬರು ಸದಸ್ಯರಿಗೆ ‘ಉತ್ತಮ ಕೃಷಿಕ ಸದಸ್ಯ’ ಎಂದು ಮತ್ತು ಪ್ರಸಕ್ತ ವರ್ಷದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.

  ಟಿಆರ್‌ಸಿಯು ತಾನು ಸಾಗಿ ಬಂದ ಕಾಲಘಟ್ಟದಲ್ಲಿ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಅಡಿಕೆ ಉತ್ಪಾದನೆ, ಮಾರುಕಟ್ಟೆ ಸ್ಥಿತ್ಯಂತರ, ಬೆಲೆಗಳಲ್ಲಾದ ಏರಿಳಿತ ಇವೆಲ್ಲವುಗಳ ಪರಿಣಾಮವನ್ನು ಸದಸ್ಯರು ಎದುರಿಸಿದ್ದಾರೆ. ಇಂತಹ ಸಂಕಷ್ಟಗಳ ನಡುವೆಯೂ ಪ್ರಾಮುಖ್ಯವಾಗಿ ಅಡಿಕೆ ಹಾಗೂ ಉಪ ಬೆಳೆಗಳನ್ನು ಆಧರಿಸಿ ಸದಸ್ಯರು ಜೀವನ ನಿರ್ವಹಿಸುವುದರೊಂದಿಗೆ ಮುಂದಿನ ತಲೆಮಾರಿಗೆ ಭದ್ರತೆಯನ್ನು ಸಹ ಒದಗಿಸಿದ್ದಾರೆ. ಇಂತಹ ಸಮಯದಲ್ಲಿ ಸದಸ್ಯರ ಆರ್ಥಿಕ ಹಾಗೂ ನೈತಿಕ ಬೆನ್ನೆಲುಬಾಗಿ ನಮ್ಮ ಸಂಘವು ನಿಂತು ಸದಸ್ಯರ ಏಳ್ಗೆ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

  • ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್‌ಸಿ
  Share This
  300x250 AD
  300x250 AD
  300x250 AD
  Leaderboard Ad
  Back to top