Slide
Slide
Slide
previous arrow
next arrow

ಶಾಸಕ ಸತೀಶ್ ಸೈಲ್‌ಗೆ ಗುತ್ತಿಗೆದಾರರ ಸನ್ಮಾನ

300x250 AD

ಕಾರವಾರ: ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಸತೀಶ್ ಸೈಲ್ ಅವರಿಗೆ ಕಾರವಾರ- ಅಂಕೋಲಾ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸನ್ಮಾನ ಕಾರ್ಯಕ್ರಮವು ನಗರದ ಅಜ್ವಿ ಓಶಿಯನ್ ಹೋಟೆಲ್‌ನ ಸಭಾಂಗಣದಲ್ಲಿ ನಡೆಯಿತು.

ಫಲ ತಾಂಬೂಲ ನೀಡಿ, ಶಾಲು ಹೊದಿಸಿ, ಬುದ್ಧನ ಮೂರ್ತಿ ನೀಡಿ ಗುತ್ತಿಗೆದಾರರು ಸೈಲ್ ಅವರಿಗೆ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೈಲ್, ಸನ್ಮಾನಿಸಿದ ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೇ, ಚುನಾವಣೆಯಲ್ಲಿ ಕೆಲವರು ನನಗೆ ಹೆಚ್ಚು ಮಾತನಾಡಬೇಡ, ಮಾತನಾಡಿದರೆ ಓಟು ಮೈನಸ್ ಆಗಲಿದೆ ಎಂದು ತಿಳಿಸಿದ್ದರು. ಆದರೆ ಕೆಲವೊಮ್ಮೆ ಸಹಿಸಿಕೊಳ್ಳಲಾಗುವುದಿಲ್ಲ. ಮಾತನಾಡಲೇ ಬೇಕಾಗುತ್ತದೆ. ಸತ್ಯ ಸತ್ಯವೇ, ಬಾಯುಮುಚ್ಚಿಕೊಂಡ ಕಾರಣಕ್ಕೆ ಸತ್ಯ ಸುಳ್ಳಾಗುವುದಿಲ್ಲ ಎಂದರು. ನಿಮ್ಮೆಲ್ಲರ ಪ್ರೀತಿ, ಇಲ್ಲಿ ಸೇರಿದವರ ಸಂಖ್ಯೆಯನ್ನ ನೋಡಿದರೆ ಮುಂದಿನ ಬಾರಿ 30 ಸಾವಿರ ಲೀಡ್‌ನಲ್ಲಿ ನಾನು ಗೆಲ್ಲುವುದು ಖಂಡಿತ ಎಂದೆನಿಸುತ್ತದೆ ಎಂದರು.

ಗುತ್ತಿಗೆದಾರರು ಮಾಡಿದ ವಿವಿಧ ಕಾಮಗಾರಿಯ ಬಿಲ್ ಪಾವತಿಯಾಗದ ಕಾರಣ ಶೀಘ್ರವೇ ಸಿವಿಲ್ ಗುತ್ತಿಗೆದಾರರ ನಿಯೋಗವನ್ನು ಸಿಎಂ ಬಳಿ ಒಯ್ದು ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಕಾಮಗಾರಿಗಳ ಬಿಲ್ ಪಾವತಿ ಮಾಡಲು ಸದ್ಯ ತಡೆ ಹಿಡಿದು ಆದೇಶ ಹೊರಡಿಸಿರುವ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ನಡೆದ ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆಗೊಳಪಡಿಸಲು ಈ ಆದೇಶ ಹೊರಡಿಸುವುದು ಸರ್ಕಾರಕ್ಕೆ ತಾತ್ಕಾಲಿಕವಾಗಿ ಅನಿವಾರ್ಯವಾಗಿತ್ತು ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ, ಸಾಲ ಮಾಡಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಗುತ್ತಿಗೆದಾರರು ಸಹ ಗೌರವದ ಜೀವನ ನಡೆಸುವಂತಾಗಬೇಕು. ಈ ಹಿಂದಿನ 5 ವರ್ಷಗಳಲ್ಲಿ ಗುತ್ತಿಗೆದಾರರು ಎದುರಿಸಿದ ಕಷ್ಟ ಎಲ್ಲರಿಗೆ ಗೊತ್ತಿದೆ. ಆಗ ಜನಪ್ರತಿನಿಧಿಯ ಅವಕೃಪೆಗೆ ಕಾರಣರಾದವರು ಕೆಲಸವಿಲ್ಲದೆ ಪರದಾಡುವಂತಾಗಿತ್ತು. ನಮ್ಮ ಹಿತವನ್ನು ಸಹ ಜನಪ್ರತಿನಿಧಿಗಳು ಕಾಯುವಂತಾಗಬೇಕು. ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ, ಹೊರಗಿನವರಿಗೆ ಕಾಮಗಾರಿ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ. ನಮ್ಮ ಸಮಸ್ಯೆಗಳನ್ನು ಹಿಂದಿನ ಶಾಸಕರು ಕೇಳಲು ಸಹ ನಿರಾಕರಿಸಿದರು. ಆದರೆ ಈಗ ಸತೀಶ ಸೈಲ್ ಅವರು ಮತ್ತೊಮ್ಮೆ ಆಯ್ಕೆಯಾಗಿ ಶಾಸಕರಾಗಿರುವುದರಿಂದ ಎಲ್ಲರಿಗೂ ನ್ಯಾಯ ಸಿಗುವ ಭರವಸೆ ಮೂಡುವಂತಾಗಿದೆ ಎಂದರು.

ಕಾರ್ಯಕ್ರಮವನ್ನು ಶಿಕ್ಷಕ ಗಣೇಶ ಬಿಷ್ಠಣ್ಣನವರ ನಿರೂಪಿಸಿದರು. ನಿಸರ್ಗ ಬಿಷ್ಠಣ್ಣನವರ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಧೀರೂ ಶಾನಭಾಗ, ದೀಪಕ ಕುಡಾಳಕರ, ಸಂದೀಪ ಕೊಠಾರಕರ, ಮುರುಕುಂಡಿ ಪಿ.ನಾಯ್ಕ, ಸಂತೋಶ್ ಸೈಲ್, ಅನೀಲ ಮಾಳ್ಸೇಕರ, ರವಿ ನಾಯ್ಕ, ಉಪೇಂದ್ರ ನಾಯ್ಕ ಸೇರಿದಂತೆ ನೂರಕ್ಕೂ ಹೆಚ್ಚು ಗುತ್ತಿಗೆದಾರರು ಇದ್ದರು.

Share This
300x250 AD
300x250 AD
300x250 AD
Back to top