ಶಿರಸಿ: ಇಲ್ಲಿನ ನೆಮ್ಮದಿ ಕುಟೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮೇ. 28, ರವಿವಾರದಂದು ಮುಂಜಾನೆ 9 ಗಂಟೆಗೆ ‘ಮಕ್ಕಳ ಸಾಹಿತ್ಯ ಕಮ್ಮಟ’ವನ್ನು ಆಯೋಜಿಸಲಾಗಿದೆ.
ಶ್ರೀಮತಿ ಅನಿತಾ ಪಾರ್ವತೀಕರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ್ ಉಪಸ್ಥಿತರಿರುವರು. ಸಭಾಧ್ಯಕ್ಷತೆಯನ್ನು ಮಂಜುನಾಥ ಹೆಗಡೆ ಹೂಡ್ಲಮನೆ ವಹಿಸುವರು.
ಕಾರ್ಯಕ್ರಮದ ಆರಂಭದಲ್ಲಿ ರಾಜಲಕ್ಷ್ಮಿ ಭಟ್ ಪ್ರಾರ್ಥನೆ ನೆರವೇರಿಸಿದರೆ, ಕೆ.ಮಹೇಶರವರಿಂದ ಸ್ವಾಗತ ಹಾಗೂ ದಿವಸ್ಪತಿ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡುವರು. ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್. ಭಟ್ ಆಶಯ ನುಡಿಗಳನ್ನಾಡಲಿದ್ದಾರೆ.
ನಂತರ ಸುಮಿತ್ರಾ ಜಿ. ಹೆಗಡೆ, ರಮೇಶ ಹೆಗಡೆ ಕೆರೆಕೋಣ, ಪೂರ್ಣಿಮಾ ಹೆಗಡೆ, ಮಹೇಶಕುಮಾರ ಹನ್ಕೆರೆ, ರಾಜೇಶ್ವರಿ ಹೆಗಡೆ, ರೇವತಿ ಭಟ್, ಶೋಭಾ ಭಟ್ಸ ಮೊದಲಾದ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಕಮ್ಮಟ (ವೇದಿಕೆ ಮತ್ತು ಗಿಡ-ಮರಗಳ ನಡುವೆ) ನಡೆಯಲಿದೆ.
ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯ ಪ್ರಭೆಯು ಈ ಮೂಲಕ ಅನಾವರಣಗೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳು ತಮ್ಮತಮ್ಮ ಸಾಹಿತ್ಯ ರಚನೆಯ ಮೂಲಕ ಪಾದಾರ್ಪಣೆಗೊಳ್ಳಲಿ. ಮುಂದೆಯೂ ಸಹ ಬಾಲ ಪ್ರತಿಭೆಗಳಿಗೆ ಅವಕಾಶ ದೊರೆತು ಹೊಸ ಮುಖಗಳು ಸಾರಸ್ವತ ಲೋಕವನ್ನಾಳಲಿ, ಶಿಶು ಸಾಹಿತ್ಯ ಸಂದ್ಭರಿತವಾಗಲಿ ಎಂಬ ಸದುದ್ದೇಶದಿಂದ ಆಟ,ಪಾಟ,ವಾಚನ, ಗಾಯನ ಮುಖೇನ “ಮಕ್ಕಳ ಸಾಹಿತ್ಯ ಕಮ್ಮಟ”ವನ್ನು ಆಯೋಜಿಸಲಾಗಿದೆ.
ಬಳಿಕ ನಡೆಯಲಿರುವ “ಶಿಶುಗೀತಾ ಕಮ್ಮಟ” ಅಧ್ಯಕ್ಷತೆಯನ್ನು ಸುಮಿತ್ರಾ ಹೆಗಡೆ ವಹಿಸಲಿದ್ದು, ಸಾಹಿತಿ ಕೃಷ್ಣ ಪದಕಿ ಮತ್ತು ಎಸ್.ಎಮ್.ಹೆಗಡೆ ಉಪಸ್ಥಿತರಿರುವರು. ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಮಕ್ಕಳ ಕವಿತೆಯನ್ನು ವಾಚಿಸಲಿಚ್ಛಿಸುವ ಹಿರಿಕಿರಿಯರು ತಮ್ಮ ಹೆಸರನ್ನು (ದತ್ತಗುರು ಕಂಠಿ – Tel:+919483648230) ನೊಂದಾಯಿಸಿಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.