ಶಿರಸಿ: ಬೇಸಿಗೆಯ ತಾಪದಿಂದ ಎಲ್ಲಾ ಕಡೆ ನೀರಿನ ಹಾಹಾಕಾರ ಹೆಚ್ಚುತ್ತಿದೆ. ಇದರಿಂದ ಮತ್ತೊಂದು ಜಲಮೂಲಗಳನ್ನು ಅಭಿವೃದ್ಧಿ ಪಡಿಸಲು ಜೀವಜಲ ಕಾರ್ಯಪಡೆಯು ಕೆಲಸ ಆರಂಭಿಸಿದೆ.
ಕಳೆದ ಆರು ವರ್ಷಗಳಿಂದ ಶಿರಸಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಸಹಕರಿಸಿರುವ ಜೀವಜಲ ಕಾರ್ಯಪಡೆ ಈಗಲೂ ತನ್ನ ಕೆಲಸ ಮುಂದುವರೆಸಿದ್ದು, ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಈಗ ಗೌಡಳ್ಳಿಯ ಕೆಂಪು ಕೆರೆ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ.
ಕಳೆದ ಎರಡು ದಿನಗಳಿಂದ ಗೌಡಳ್ಳಿಯಲ್ಲಿ ಹೆಬ್ಬಾರ್ ನೇತೃತ್ವದಲ್ಲಿ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಎರಡು ಹಿಟಾಚಿ ಮತ್ತು ಎರಡು ಟಿಪ್ಪರ್ ಗಳನ್ನು ಬಳಸಿ ಹೂಳೆತ್ತುವ ಕೆಲಸ ನಡೆಯುತ್ತಿದ್ದು, ಅರ್ಧದಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಅಂದಾಜು 20 ಅಡಿಯಷ್ಟು ಆಳದ ಹೂಳನ್ನು ತೆಗೆಯುವ ಕೆಲಸ ನಡೆಯುತ್ತಿದೆ.
ಗೌಡಳ್ಳಿಯ ಕೆಂಪು ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಇಷ್ಟು ದಿನ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಜೊತೆಗೆ ಗಿಡ ಗಂಟಿಗಳು ಬೆಳೆದುಕೊಂಡಿತ್ತು. ಆದರೆ ಈಗ ಅದನ್ನು ಸ್ವಚ್ಚಗೊಳಿಸಿ ಅಭಿವೃದ್ಧಿ ಪಡಿಸುವ ಕೆಲಸ ಜೀವಜಲ ಕಾರ್ಯಪಡೆಯಿಂದ ನಡೆಯುತ್ತಿದ್ದು, ಇವರ ಕೆಲಸಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.