ಶಿರಸಿ: ತಾಲೂಕಿನಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಗುರಿ ಸಾಧನೆ ಕಡಿಮೆಯಿದ್ದು, ಸಂಬoಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕರೀಮ್ ಅಸಾದಿ ಅವರು ಸೂಚನೆ ನೀಡಿದರು.
ತಾಲೂಕಿನ ಅಬ್ದುಲ್ ನಜೀರ್ ಸಾಬ ಸಭಾಭವನದಲ್ಲಿ ನರೇಗಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮಾನವ ದಿನಗಳ ಗುರಿ ಸಾಧನೆ ಕಡಿಮೆಯಿರುವ ಗ್ರಾಮ ಪಂಚಾಯತ್ ಗಳಿಗೆ ಈಗಾಗಲೇ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಹಿತ ಪ್ರಗತಿ ಸಾಧನೆಯಾಗಿಲ್ಲ ಹಾಗಾಗಿ ಇನ್ನೂ 15 ದಿನಗಳೊಳಗೆ ಪ್ರಗತಿ ಸಾಧಿಸಬೇಕಿದೆ ಎಂದರು. ಜೊತೆಗೆ ಅಮೃತ ಸರೋವರ ಕಾಮಗಾರಿ ಶೀಘ್ರವೆ ಪೂರ್ಣಗೊಳಿಸಬೇಕು ಎಂದರು.
ನರೇಗಾದಡಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳಲ್ಲಿಯೂ ಪ್ರಗತಿಯಾಗಬೇಕು. ಜೊತೆಗೆ ಆಧಾರ್ ಸಿಡಿಂಗ್, ವರ್ಕ್ ಕಂಪ್ಲಿಷನ್, ಎನ್‌ಎಮ್‌ಎಮ್‌ಎಸ್, ಎನ್‌ಆರ್‌ಎಲ್‌ಎಮ್ ವರ್ಕ್ ಶೆಡ್ ಮುಂತಾದ ವಿಷಯಗಳ ಕುರಿತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೇವರಾಜ್ ಹಿತ್ತಲಕೊಪ್ಪ, ನರೇಗಾ ಸಹಾಯಕ ನಿರ್ದೇಶಕರಾದ ಬಿ.ವಾಯ್ ರಾಮಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.