ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದ ಶ್ರೀಕೆರ್ಲೆ ಜಟಕೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶನಿವಾರ ಹಾಗೂ ಭಾನುವಾರ ವಿಜೃಂಭಣೆಯಿ0ದ ಜರುಗಿತು.
ಕಾರವಾರದ ‘ಓಂ ಪ್ಲೆಕ್ಸ್’ನ ಮಾಲಕರಾದ ರತ್ನಾಕರ ನಾಯ್ಕ ಮತ್ತು ದಿವ್ಯಾ ನಾಯ್ಕ ದಂಪತಿ ವೈಯಕ್ತಿಕ ವೆಚ್ಚದಲ್ಲಿ ದೇವಸ್ಥಾನದ ಮಹಾದ್ವಾರ ನಿರ್ಮಿಸಿದ್ದರು. ಶನಿವಾರ ಸಂಜೆ ದೇವತಾ ಪ್ರಾರ್ಥನೆ, ಫಲನ್ಯಾಸ, ಸಪ್ತಶುದ್ಧಿ, ರಾಕ್ಷೋಘ್ನ, ವಾಸ್ತು ಹವನ, ವಾಸ್ತುಬಲಿ, ಇಂದ್ರಾದಿಬಲಿ, ಕ್ಷೇತ್ರಪಾಲ ಬಲಿ, ಮಹಾದ್ವಾರದ ಕಲಶಗಳಿಗೆ ಆಧಿವಾಸಾಧಿ ಪೂಜೆ ನಡೆದು, ಭಾನುವಾರ ಬೆಳಿಗ್ಗೆ ಗಣೇಶ ಪೂಜೆ ಪುಣ್ಯಾಹ, ಚಂಡೆ ವಾದ್ಯದೊಂದಿಗೆ ಶ್ರೀದೇವರ ಪರಿವಾರ ದೇವರುಗಳಿಗೆ ಪೂಜೆ, ನವಗ್ರಹ ಹೋಮದ ಬಳಿಕ ಮಹಾದ್ವಾರ ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ಕಲಶ ಪ್ರತಿಷ್ಠೆ, ಶ್ರೀದೇವರಿಗೆ ಕಲಾವೃದ್ಧಿ ಹವನ, ಪೂರ್ಣಾಹುತಿ, ಕುಂಭಾಬಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ರಾತ್ರಿ ಶ್ರೀಕೆರ್ಲೆ ಜಟಕೇಶ್ವರ ಭಕ್ತವೃಂದದವರ ವತಿಯಿಂದ ಪೇರ್ಡೂರು ಮೇಳ ಮತ್ತು ಬಡಗು-ತೆಂಕಿನ ಶ್ರೇಷ್ಠ ಅತಿಥಿ-ದಿಗ್ಗಜರ ಕೂಡುವಿಕೆಯಲ್ಲಿ ‘ರುದ್ರಾಂಶ ಸಂಭೂತ-ಮoತ್ರ ಪಾರಮ್ಯ’ ಪೌರಾಣಿಕ ಯಕ್ಷಗಾನ ಯಕ್ಷರಸಿಕರ ಮನ ತಣಿಸಿತು.