ಕಾರವಾರ: ತಾಲೂಕಿನ ಚೆಂಡಿಯಾದ ಪಾಪ್ಯುಲರ್ ನ್ಯೂ ಇಂಗ್ಲೀಷ್ ಸ್ಕೂಲ್‌ನ ಸುವರ್ಣ ಮಹೋತ್ಸವ ಮೇ 20ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶಾಲೆಯ ಸುವರ್ಣ ಮಹೋತ್ಸವ ಕಮಿಟಿಯ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಹೊಸ ಕಟ್ಟಡ ನಿರ್ಮಾಣ ಆಗಬೇಕಿದ್ದು, ಸುವರ್ಣ ಮಹೋತ್ಸವದ ಸಂಭ್ರಮದ ದಿನ ಬೆಳಿಗ್ಗೆ 10 ಗಂಟೆಗೆ ನೂತನ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. 10.30ಕ್ಕೆ ಗುರುಶಿಷ್ಯರ ಸಮಾಗಮ, ಅನುಭವ ಹಂಚಿಕೆ, ಮಧ್ಯಾಹ್ನ 2.30ರಿಂದ ಲಘು ಆಟೋಟ, ಸಂಜೆ 5 ಗಂಟೆಯಿoದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಸಾಹಿತಿ ಅರುಣಕುಮಾರ ಹಬ್ಬು ಉದ್ಘಾಟಿಸಲಿದ್ದಾರೆ. ನಿವೃತ್ತ ಮುಖ್ಯಾಧ್ಯಾಪಕ ದಿ.ಎನ್.ಎಮ್.ಕಾಮತ್ ಅವರ ಪತ್ನಿ ಸುನಂದಾ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಾಹಿತಿ ನಾರಾಯಣ ಗಾಂವಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 7 ಗಂಟೆಯಿ0ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕಳೆದ 75 ವರ್ಷಗಳಿಂದಲೂ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಚೆಂಡಿಯಾ ಗ್ರೂಪ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ವೆಂಕಟರಾಯ ಪೆಡ್ನೇಕರ, ಶಾಲೆಯ ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ, ಉಜ್ವಲಾ, ಭಾರತಿ ಸೈಲ್, ಗಣಪತಿ ಬಾಡಕರ, ರಾಮನಾಥ ಭಟ್ಟ, ಮಂಜುನಾಥ ಪೆಡ್ನೇಕರ, ಅಜಯ ಸಾಹುಕಾರ, ಸತೀಶ ಗಾಂವಕರ, ಶಿವರಾಮ ಗಾಂವಕರ, ಸುಧಾಕರ ಮಹೇಕರ, ಸತೀಶ ಪೆಡ್ನೇಕರ ಪತ್ರಿಕಾಗೋಷ್ಟಿಯಲ್ಲಿದ್ದರು.