ಕುಮಟಾ: ಕಾಂಗ್ರೆಸ್ ಬಿರುಗಾಳಿಯ ನಡುವೆ ಪ್ರಯಾಸದಿಂದ ಗೆಲುವು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಈ ರೀತಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎನ್ನುವುದು ನಾವು ನಿರೀಕ್ಷಿಸಿರಲಿಲ್ಲ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಶನಿವಾರ ನಡೆದ ಮತ ಎಣಿಕೆಯಲ್ಲಿ ಗೆಲುವನ್ನು ಪಡೆದ ನಂತರ ಮಾತನಾಡಿದ ಅವರು ಜನತೆ ನೀಡಿದ ತೀರ್ಪಿಗೆ ನಾವೆಲ್ಲರು ತಲೆ ಬಾಗಬೇಕು. ಮತದಾರರು ನೀಡಿದ ತೀರ್ಪನ್ನು ಗೌರವದಿಂದ ಸ್ವೀಕರಿಸಬೇಕು. ನಮ್ಮ ನಡೆಯಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳಲು ಜನರು ಎಚ್ಚರಿಕೆ ಘಂಟೆ ನೀಡಿದ್ದಾರೆ ಎಂದರು. ಚುನಾವಣೆ ನಿಂತಾಗ ಎಲ್ಲರೂ ನಿರೀಕ್ಷೆ ಮಾಡಿರುತ್ತಾರೆ. ನಾನು ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ ಗೆಲುವು ಪಡೆದಿದ್ದೇನೆ. ಕಡಿಮೆ ಅಂತರದಲ್ಲಾದರು ಗೆದ್ದಿದ್ದೇವೆ ಎಂದರು.
ಎಲ್ಲಾ ಪಕ್ಷಕ್ಕೂ ಆಡಳಿತ ವಿರೋಧಿ ಅಲೆ ಇರುತ್ತದೆ. ಹಿಂದೆ ಸಿದ್ದರಾಮಯ್ಯ ಸಾಕಷ್ಟು ಕೆಲಸ ಮಾಡಿದ್ದರು ಆಗ ಕಾಂಗ್ರೆಸ್ ಪಕ್ಷ ಸೋಲನ್ನ ಕಂಡಿತ್ತು. ಅದೇ ರೀತಿ ರಾಜ್ಯದಲ್ಲಿ ಈ ಬಾರಿ ಆಗಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್, ಫ್ರೀ ಸ್ಕೀಮ್ ಜನರ ಮನಸ್ಸಿನಲ್ಲಿ ಬಡವರ ಮನಸ್ಸಿನಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮಾಡಿತು. ಅದು ಕಾಂಗ್ರೆಸ್‌ಗೆ ದೊಡ್ಡ ಲಾಭವಾಗಲು ಕಾರಣ ಎಂದು ಹೆಬ್ಬಾರ್ ಹೇಳಿದರು.
ಅಧಿಕಾರಕ್ಕೆ ಬರುವ ಪಕ್ಷಕ್ಕೆ ನಾವು ಎಲ್ಲಾ ಸಂದರ್ಭದಲ್ಲೂ ಹೋಗಲು ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೂ ತೆಗೆದುಕೊಳ್ಳುವ ಅನಿವಾರ್ಯತೆ ಬಂದಿಲ್ಲ. ಯಾವ ಸರ್ಕಾರ ಬಂದರು ನಮ್ಮ ಸ್ನೇಹಿತರೇ ಸಚಿವರಾಗಿ ಆಗುತ್ತಾರೆ. ಕ್ಷೇತ್ರದಲ್ಲಿ ಮುಂದಿನ ದಿನದಲ್ಲೂ ಅಭಿವೃದ್ದಿ ಹೆಚ್ಚಿನ ಮಟ್ಟದಲ್ಲಿ ಮಾಡಲಾಗುವುದು ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.