ಶಿರಸಿ: ಇನ್ನರ್ ವೀಲ್ ಸಂಸ್ಥೆಯ ಮೂಲ ಉದ್ದೇಶವೇ ಸ್ನೇಹ ಮತ್ತು ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವ ಸಲುವಾಗಿ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆ ಅನೇಕ ತರಬೇತಿಗಳನ್ನು ನೀಡಿ ಮಹಿಳೆಯರನ್ನು ಅಣಿಗೊಳಿಸುತ್ತಾ ಬಂದಿದೆ ಎಂದು ಇನ್ನರ್ವಿಲ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಮಹಾನಂದ ಚಂದರ್ಗಿ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಇನ್ನರ್ ವೀಲ್ ಕ್ಲಬ್ ಶಿರಸಿ, ರೋಟರಿ ಕ್ಲಬ್, ಸಿಂಗರ್ ಕಂಪನಿಯ ಸಹಯೋಗದಲ್ಲಿ ನಡೆದ ಟೇಲರಿಂಗ್, ಎಂಬ್ರಾಯ್ಡ್ರಿ ಡಿಪ್ಲೊಮಾ ಕೇಂದ್ರವನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿ ದಿಶೆಯಿಂದಲೇ ಜೀವನ ನಿರ್ವಹಣೆಯನ್ನು ರೂಡಿಸಿಕೊಳ್ಳಬೇಕು , ಆರ್ಥಿಕವಾಗಿ ಸಬಲರಾಗಬೇಕು, ಅದಕ್ಕಾಗಿ ನಮ್ಮ ಸಂಸ್ಥೆಯ ಇದಕ್ಕೆ ಅವಕಾಶ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಕೆ.ವಿ.ಶಿವರಾಮ್ ಪ್ರಸ್ತಾವಿಸಿ ಮಾತನಾಡಿ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಅನಾವರಣಗೊಳಿಸಲಾಗಿದೆ. ಕೇವಲ ವಿದ್ಯಾರ್ಥಿನಿಯರಿಗೆ ಅಲ್ಲದೆ ಬಡ, ಅಸಹಾಯಕ ಮಹಿಳೆಯರಿಗೂ ಮುಕ್ತ ಅವಕಾಶವನ್ನು ಕಲ್ಪಿಸಿ ಹೊಲಿಗೆ, ಎಂಬ್ರಾಯ್ಡ್ರಿ ತರಬೇತಿಯನ್ನು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ಕಾಲೇಜಿನ ಉಪಸಮಿತಿಯ ಅಧ್ಯಕ್ಷ ಎಸ್. ಕೆ. ಭಾಗವತ್ ಮಾತನಾಡಿ, ಇಂದಿನ ಮಹಿಳೆಯರು ಪ್ರಗತಿಶೀಲರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಯಾವಾಗಲೂ ಹೊಸತನವನ್ನು ಸ್ವಾಗತಿಸುತ್ತದೆ. ಪದವಿ ಜೊತೆಗೆ ಕೌಶಲ್ಯ ಹೊಂದುವದು ಇಂದಿನ ಅಗತ್ಯತೆ.ಈ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರವನ್ನು ಪ್ರಾರಂಬಿಸಲಾಗಿದೆ. ವಿದ್ಯಾರ್ಥಿಗಳನ್ನು ಪ್ರಗತಿಶೀಲರನ್ನಾಗಿಸುವ ಗುರಿ ಇಟ್ಟುಕೊಂಡು ಇಂತಹ ಯೋಜನೆಗಳನ್ನು ಕಾಲೇಜಿನಲ್ಲಿ ಜಾರಿಗೊಳಿಸಿದ್ದೇವೆ. ಆಸಕ್ತರು ಸಂಪೂರ್ಣ ಉಪಯೋಗ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಂಗರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇಕ್ ಇಮ್ರಾನ್, ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಹೆಗಡೆ, ಇನ್ನರ್ ವೀಲ್ ಸಂಸ್ಥೆಯ ಸದಸ್ಯರುಗಳು, ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಇನ್ನರ್ ವೀಲ್ ಸಿರ್ಸಿ ಅಧ್ಯಕ್ಷೆ ಮಾಧುರಿ ಶಿವರಾಮ್ ಸ್ವಾಗತಿಸಿದರು, ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎಸ್. ಹಳೆಮನೆ ವಂದಿಸಿದರು. ಡಾ. ದಿವ್ಯಾ ಹೆಗಡೆ ನಿರೂಪಿಸಿದರು.