ಶಿರಸಿ: ಇಲ್ಲಿನ ಟಿ.ಎಂ.ಎಸ್. ಸಭಾಭವನದಲ್ಲಿ ಏ.23 ರವಿವಾರದಂದು ಯಕ್ಷಾಂಕುರ ವತಿಯಿಂದ ನಡೆದ ‘ಮಕ್ಕಳ ಯಕ್ಷಗಾನ ಬೇಸಿಗೆ ಶಿಬಿರದ’ ಮುಕ್ತಾಯ ಸಮಾರಂಭದಲ್ಲಿ ಮಕ್ಕಳಿಂದ ಮೂಡಿಬಂದ “ಪ್ರಸೂತಪುರ ಮಹಾತ್ಮೆ” ಎಂಬ ನೂತನ ಯಕ್ಷಗಾನವು ಪ್ರೇಕ್ಷಕರನ್ನು ಮನರಂಜಿಸಿತು.
ಈ ಶಿಬಿರಾರ್ಥಿಗಳಿಗೆ ಯಕ್ಷಗುರು ಪರಮೇಶ್ವರ ಹೆಗಡೆ ಐನಬೈಲ್ ನಿರ್ದೇಶಿಸಿ, ಭಾಗವತಿಕೆ ನಿರ್ವಹಿಸಿದ್ದರು. ಬಾಲವಿದ್ಯಾರ್ಥಿ ಅನಿಮೇಶ ಕೂಡ ಭಾಗವತಿಕೆಯಲ್ಲಿ ರಂಜಿಸಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಇಂಜನೀಯರ್ ಬಿ.ರವಿಶಂಕರ, ಮಕ್ಕಳನ್ನು ಸಂಸ್ಕಾರದೆಡೆಗೆ ಒಯ್ಯುವ ಯಕ್ಷಾಂಕುರ ತಂಡದವರ ಕಾರ‍್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಮುಖ ಟಿ.ವಿ. ಸಂಪಾದಕರಾದ ಸುಬ್ರಾಯ ಭಟ್ಟ ಬಕ್ಕಳ ಮಕ್ಕಳು ಮೊಬೈಲ್‌ನಿಂದ ದೂರವಿದ್ದು ಸಂಸ್ಕೃತಿ ಕಟ್ಟುವ ಯಕ್ಷರಂಗದ ಕಲೆಯನ್ನು ರೂಢಿಸಿಕೊಳ್ಳುತ್ತಿರುವ ಬಗ್ಗೆ ಪ್ರಶಂಸನಾ ಮಾತನ್ನಾಡಿದರು. ಯಕ್ಷಾಂಕುರ ಕಾರ್ಯದರ್ಶಿಗಳಾದ ನಾಗೇಂದ್ರ ಭಟ್ಟ ಸುಂಕದಗುಂಡಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ. ಪಿ. ಹೆಗಡೆ ಪ್ರಾರ್ಥನೆ ನಡೆಸಿಕೊಟ್ಟರು. ಯಕ್ಷಾಂಕುರ ಸದಸ್ಯರಾದ ಕೆ.ಎಲ್.ಭಟ್ಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಧ್ಯಕ್ಷರಾದ ಸುರೇಶ ಹೆಗಡೆ ಮಾರ್ಗದರ್ಶನ ನೀಡಿದರು. ಶಿಬಿರಾರ್ಥಿಗಳಿಗೆ ಯಕ್ಷಗಾನ ಅಕಾಡೆಮಿಯ ಹಿಂದಿನ ಸದಸ್ಯರಾದ ನಿರ್ಮಲಾ ಹೆಗಡೆ ಗೋಳಿಕೊಪ್ಪ ಮತ್ತು ಕಾರ್ಯಕ್ರಮದ ಅಧ್ಯಕ್ಷರಾದ ಬಿ.ರವಿಶಂಕರ ಪ್ರಮಾಣಪತ್ರ ನೀಡಿ ಗೌರವಿಸಿದರು. ಪ್ರಸನ್ನ ಭಟ್ಟ ತಂಡದವರು ಯುಟ್ಯೂಬ್ ಚಾನೆಲ್‌ನಲ್ಲಿ ಯಕ್ಷಗಾನ ಪ್ರದರ್ಶನವನ್ನು ಬಿತ್ತರಿಸಿದರು.