Slide
Slide
Slide
previous arrow
next arrow

‘ಶ್ರೀರಾಮ ವಿಕ್ರಮ’, ‘ಶ್ರೀರಾಮ ಸ್ತುತಿ’ ಪುಸ್ತಕ ಬಿಡುಗಡೆ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ವಿಕ್ರಮ ಪಿ.ನಾಯ್ಕರ ಶ್ರೀರಾಮ ವಿಕ್ರಮ ಮತ್ತು ಶ್ರೀರಾಮ ಸ್ತುತಿ ಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಕನ್ನಡ ಭವನದಲ್ಲಿ ನಡೆಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಾಮಕೃಷ್ಣಾಶ್ರಮ ಭವೇಶಾನಂದ ಸ್ವಾಮೀಜಿ, ಭಾರತವು ಪವಿತ್ರವಾದ ಭೂಮಿ. ರಾಮ- ಕೃಷ್ಣರು ಪವಿತ್ರ ಪುರುಷರು. ರಾಮನ ನಾಮದಲ್ಲಿ ವಿಕ್ರಮ ನಾಯ್ಕರವರು ರಚಿಸಿದ ಕೃತಿಗಳು ಅಷ್ಟೇ ಪವಿತ್ರವಾಗಿವೆ. ಅವು ಜಗದಗಲದಲ್ಲಿ ಕೀರ್ತಿಯನ್ನು ಸಂಪಾದಿಸಲೆಂದು ಆಶೀರ್ವದಿಸಿದರು.

ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಾನಂದ ನಾಯಕ, ಶ್ರೀರಾಮ ವಿಕ್ರಮ ಕೃತಿಯು ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿದೆ. ಆರಂಭಿಕ ಸ್ಮರಣೆ ಅದ್ಭುತವಾಗಿದೆ. ಮುಕ್ತಾಯ ಕೌತುಕದಿಂದ ಮುಗಿದಿದೆ. ಇದು ಇಷ್ಟಕ್ಕೆ ನಿಲ್ಲದೆ, ರಾಮಾಯಣದ ಮುಂದಿನ ಭಾಗ ತಮ್ಮ ರಗಳೆಯ ಲಯದಲ್ಲಿ ಮೂಡಿಬರಲೆಂದು ಆಶಿಸಿದರು. ಉದ್ಯಮಿ ವಿಜಯಕುಮಾರ್ ನಾಯಕ, ಬಹು ಪರಿಶ್ರಮದಿಂದ ಪುಸ್ತಕ ಬರೆದಿದ್ದಾರೆ ಸದರಿ ಪುಸ್ತಕ ಬೇಗನೆ ಜನಪ್ರಿಯತೆ ಪಡೆಯಲೆಂದು ಹಾರೈಸಿದರು. ಯುವ ಪ್ರತಿಭಾವಂತ ಓಂಕಾರ ಪಾವಸ್ಕರ ಶ್ರೀರಾಮ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು. ಅವರಿಗೆ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.

ಕೃತಿಕಾರ ವಿಕ್ರಮ ಪಿ.ನಾಯ್ಕ, ಕೋವಿಡ್ ಸಂದರ್ಭದಲ್ಲಿ ದೂರದರ್ಶನ ಮರುಪ್ರಸಾರ ಮಾಡಿದ ರಾಮಾಯಣ ಧಾರವಾಹಿಯು ನನ್ನಲ್ಲಿ ಪುಸ್ತಕ ಬರೆಯಬೇಕೆಂಬ ಸ್ಫೂರ್ತಿಯನ್ನು ಹುಟ್ಟಿಸಿತು. ನನ್ನ ಸೊಸೆ ಅದಕ್ಕೆ ಪ್ರೇರಣೆ ಒದಗಿಸಿದರು. ಇದರಿಂದ ಬರೆಯಲು ಉತ್ಸುಕನಾದೆ, ಆರಂಭಿಸಿದೆ. ಆದರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಛಂದಸ್ಸು ಸುಲಭವಲ್ಲ. ಅದರಲ್ಲೂ ಮಂದಾನಿಲ ರಗಳೆ ಹಿರಿಯ ವಿದ್ವಾಂಸರ ಮಾರ್ಗದರ್ಶನ ಹಾಗೂ ರಾಮಾ ನಾಯ್ಕರವರ ಸಹಕಾರದಿಂದ ಇಂದು ಬಿಡುಗಡೆಯಾಗಿದೆ, ತೃಪ್ತನಾಗಿರುವೆ ಎಂದರು. ಇದೇ ಸಮಯದಲ್ಲಿ ಕಸಾಪ ವತಿಯಿಂದ ಲೇಖಕರಿಗೆ ಗೌರವಿಸಲಾಯಿತು.

300x250 AD

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ನಾವು ಹೊಸ ಮನ್ವಂತರಕ್ಕೆ ಅಣಿಯಾಗಿದ್ದೇವೆ. ಜಿಲ್ಲೆಯ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಾಶನಕ್ಕೆ ಕೈ ಹಾಕಿದ್ದೇವೆ. ಜಿಲ್ಲೆಯಲ್ಲಿ ಸಾಹಿತಿಗಳು ಹೆಚ್ಚಾಗಬೇಕೆಂಬ ಮಹಾದಾಸೆ ನಮ್ಮದು. ಇಂದು ಬಿಡುಗಡೆಯಾದ ಪುಸ್ತಕಗಳನ್ನು ಕಸಾಪ ಪ್ರಕಾಶನ ಮಾಡಿದ್ದರ ಬಗ್ಗೆ ಹೆಮ್ಮೆ ಇದೆ. ಈ ಪುಸ್ತಕ ಹೆಚ್ಚು ಪ್ರಚಾರ ಪಡೆಯಲು ರಾಜ್ಯ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವೇದಿಕೆಯ ಮೇಲೆ ಕಸಾಪ ಕಾರ್ಯದರ್ಶಿ ಬಾಬು ಶೇಖ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಸಾಪ ಸದಸ್ಯರು, ವಿ.ಪಿ.ನಾಯ್ಕರ ಸಹೋದ್ಯೋಗಿಗಳು, ಕುಟುಂಬಸ್ಥರು ಪಾಲ್ಗೊಂಡಿದ್ದರು. ವಿದ್ಯಾ ನಾಯ್ಕ ಸಂಗಡಿಗರ ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಬಿಷ್ಠಣ್ಣನವರ ನಿರೂಪಿಸಿ ವಂದಿಸಿದರು. ರಮೇಶ ಗುನಗಿ ಸಹಕರಿಸಿದರು.

Share This
300x250 AD
300x250 AD
300x250 AD
Back to top