ಶಿರಸಿ ತಾಲೂಕಿನ ದೇವನಳ್ಳಿ ಹತ್ತಿರದ ಬೆಣಗಾಂವ್‌ದಲ್ಲಿ ಮಾ.19 ರಂದು ಸಂಜೆ, ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಯಕ್ಷಕೂಟದಿಂದ “ಕದಂಬ ಕೌಶಿಕೆ” ತಾಳಮದ್ದಲೆ ರಸವತ್ತಾಗಿ ಮೂಡಿ ಬಂತು.
ಎಂ.ಪಿ. ಹೆಗಡೆ ಉಲ್ಲಾಳಗದ್ದೆ, ಮತ್ತು ವಿಠ್ಠಲ ಪೂಜಾರಿ ಮಂಚಿಕೇರಿ, ಹಿಮ್ಮೇಳ ವೈಭವದಲ್ಲಿ ಮಿಂಚಿ ಪ್ರೇಕ್ಷಕರನ್ನು ತಲೆತೂಗಿಸಿದರು.
ಪ್ರಧಾನ ಅರ್ಥಧಾರಿಗಳಾಗಿ ಡಾ. ಜಿ.ಎ. ಹೆಗಡೆ, ಸೋಂದಾ, ಆರ್.ಟಿ. ಭಟ್ಟ ಕಬ್ಗಾಲ, ರಘುಪತಿ ನಾಯ್ಕ ಹೆಗ್ಗರಣಿ, ಅರ್ಥ ಹೇಳಿ ಕಥೆಯನ್ನು ಕಥಾನಕವಾಗಿಸಿ ಆಖ್ಯಾನದ ಯಶಸ್ಸಿಗೆ ಕಾರಣರಾದರು.
ರಕ್ತಬೀಜನಾಗಿ ಡಾ. ಜಿ.ಎ. ಹೆಗಡೆ ಸೋಂದಾ, ಭಕ್ತಿ ಪಾರಮ್ಯತೆಯ ನೆಲೆಯಲ್ಲಿ ಪಾತ್ರವನ್ನು ಚಿತ್ರಿಸಿ, ಮಿತ್ರಸಂಹಿತೆಯ ಶೈಲಿಯಲ್ಲಿ ಅಯೋನಿಜೆಯಾದ ದೇವಿ ಸರ್ವೇಶ್ವರಿಯು “ಜಗದಂಬಿಕೆ ಅವಳಲ್ಲಿ ಇಡು ನಂಬಿಕೆ, ಅಮ್ಮನ ಒಡಲು ಕಾರುಣ್ಯದ ಕಡಲು” ಅವಳಲ್ಲಿ ಶರಣಾಗು ಎಂಬ ವೈಚಾರಿಕ ನಿಲುವನ್ನು ಮಾರ್ಮಿಕವಾಗಿ ಮಂಡಿಸಿದರು. ನೀನು ಕೈಹಿಡಿಯುವ ಕನ್ಯೆ ಅವಳಲ್ಲ, ನಿನ್ನ ಕೈಹಿಡಿದೆತ್ತುವ ಮಹಾತಾಯಿ ಅವಳು ಎಂದು ಶುಂಭನಿಗೆ ಹಿತೋಪದೇಶ ನೀಡಿದರು.
ಪ್ರತಿಯಾಗಿ ಶುಂಭನಾಗಿ ಆರ್.ಟಿ.ಭಟ್ಟ ಕಬ್ಗಾಲ ಪ್ರಭುಸಂಹಿತೆಯ ಶೈಲಿಯಲ್ಲಿ ಜಗದ್ರಕ್ಷಕಿಯಾಗಿ ದೇವಿಯನ್ನು ಒಪ್ಪದೆ ಪ್ರಭುವಾಗಿ ಹಿಡಿದ ಛಲ ಬಿಡದೆ ದೈತ್ಯಾನ್ವಯದ ಉದ್ದಾರಕ್ಕಾಗಿ ದೇವತೆಗಳ ಮೇಲಿನ ಸೇಡಿಗೆ ಮದ್ದರೆಯುವುದೇ ತನ್ನ ಜೀವನೊದ್ದೇಶ ಎಂಬ ವಾದವನ್ನು ಮಂಡಿಸಿದರು. ರಕ್ತಬೀಜ ಮತ್ತು ಶುಂಭರ ಮಾತುಕತೆಯಲ್ಲಿ ಹಲವು ಸೂಕ್ಷ್ಮ ವಿಚಾರಗಳು, ಪೌರುಶೇಯ ಅಪೌರುಶೇಯ ಸಂಗತಿಗಳು, ಇಹಪರದ ಸಂದಿಗ್ದಗಳು ವೈಚಾರಿಕ ನೆಲೆಯಲ್ಲಿ ಚರ್ಚೆಗೆ ಬಂದು ಪ್ರೇಕ್ಷಕರ ಮೆದುಳಿಗೆ ಮೇವು ನೀಡಿ ಕಲಾರಸಿಕರಿಗೆ ರಸದೌತಣವಾಯಿತು.
ರಘುಪತಿ ನಾಯ್ಕ ಹೆಗ್ಗರಣಿ ದೇವಿಯಾಗಿ ತಾನು ಹೇಗೆ ಜಗದ ಜನನಿ ಎಂಬುದನ್ನು ಸ್ಪುಟಪಡಿಸಿದ್ದು, ಆಖ್ಯಾನಕ್ಕೆ ಮೆರಗು ನೀಡಿತು. ಚಂಡ ಮುಂಡರ ಪಾತ್ರದಲ್ಲಿ ಎಂ. ಪಿ. ಗೌಡ ಹಳೆಹಳ್ಳ, ಈಶ್ವರ ಗೌಡ ಬೆಣಗಾಂ, ಸುಗ್ರೀವನಾಗಿ ಶ್ರೀಧರ ಭಟ್ಟ ಹೆಬ್ರೆ, ದೇವೇಂದ್ರನಾಗಿ ಜಿನದತ್ತ ಜೈನ ಹೆಬ್ರೆ ಅರ್ಥಹೇಳಿ ಆಖ್ಯಾನಕ್ಕೆ ಮೆರಗು ತಂದರು.
ಬೆಣಗಾಂವದ ತಿಮ್ಮಪ್ಪ ಗೌಡ ಹಾಗೂ ಸಹೋದರರ ನೇತೃತ್ವದಲ್ಲಿ ಊರ ನಾಗರಿಕರ ಸಹಯೋಗದಲ್ಲಿ ಚೌಡೇಶ್ವರಿ ದೇವಿಯ ಆರಾಧನೆಯ ನಿಮಿತ್ತ ಈ ತಾಳಮದ್ದಲೆ ಪ್ರದರ್ಶನಗೊಂಡು ಕಲಾ ಪ್ರೇಮಿಗಳ ಮನಸೂರೆಗೊಂಡಿತು.
ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯವಕ್ತಾರರಾಗಿ ನಿವೃತ್ತ ಪ್ರಾಚಾರ್ಯ, ಯಕ್ಷಗಾನ ವಿದ್ವಾಂಸ ಡಾ. ಜಿ.ಎ. ಹೆಗಡೆ ಸೋಂದಾ, ದೇವಿಯ ಮಹಿಮಾತಿಶಯವನ್ನು ಬಣ್ಣಿಸಿ ಗ್ರಾಮೀಣ ಜನತೆಯಲ್ಲಿ ಇರುವ ಕಲಾಸಕ್ತಿಯ ಮಹತ್ವವನ್ನು ತಿಳಿಸಿದರು. ಕಲಾವಿದರಾದ ಆರ್.ಟಿ.ಭಟ್ಟ ಕಬ್ಗಾಲ ಮತ್ತು ರಘುಪತಿ ನಾಯ್ಕ ಅವರ ಉಪಸ್ಥಿತಿಯಲ್ಲಿ ತಿಮ್ಮಪ್ಪ ಗೌಡ ಬೆಣಗಾಂ ಅಧ್ಯಕ್ಷತೆ ವಹಿಸಿ ಕಲಾವಿದರ ಶ್ರಮವನ್ನು ಪ್ರಶಂಸಿಸಿ ಕಲಾವಿದರನ್ನು ಗೌರವಿಸಿದರು.