• Slide
    Slide
    Slide
    previous arrow
    next arrow
  • ಮಾ.12-14ರವರೆಗೆ ಹರಿಯಾಣದಲ್ಲಿ RSS ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ

    300x250 AD

    ಹರಿಯಾಣ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಈ ಬಾರಿ ಹರಿಯಾಣದ ಸಮಲ್ಕಾದಲ್ಲಿ ಮಾರ್ಚ್ 12-14ರವರೆಗೆ ನಡೆಯಲಿದ್ದು, ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಶುಕ್ರವಾದ ಪತ್ರಿಕಾಗೋಷ್ಠಿ ನಡೆಸಿದರು.

    ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿವರ್ಷವೂ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಡೆಸುತ್ತದೆ. ಈ ವರ್ಷ ಪಾನಿಪತ್ ಜಿಲ್ಲೆಯ ಸಮಲ್ಕಾದಲ್ಲಿ ನಡೆಸುತ್ತಿದ್ದು 12ರ ಬೆಳಿಗ್ಗೆಯಿಂದ ಪ್ರಾರಂಭವಾಗಿ 14ರ ಸಂಜೆ ಮುಕ್ತಾಯಗೊಳ್ಳಲಿದೆ. ಈ ಸಭಾದಲ್ಲಿ 1400ಕ್ಕೂ ಹೆಚ್ಚು ಪ್ರತಿನಿಧಿಗಳು ಅಪೇಕ್ಷಿತರಿದ್ದು ಇದರಲ್ಲಿ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿಯ ಎಲ್ಲ ಸದಸ್ಯರು ವಿಶೇಷವಾಗಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹ ಸರಕಾರ್ಯವಾಹರು ಮತ್ತು ಸಂಘ ಪ್ರೇರಿತ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳೂ ಸಹ ಅಪೇಕ್ಷಿತರು. ಇದಲ್ಲದೆ ಎಲ್ಲಾ ಕ್ಷೇತ್ರ ಮತ್ತು ಪ್ರಾಂತಗಳ ಸಂಘಚಾಲಕರು ಮತ್ತು ಕಾರ್ಯವಾಹರು ಹಾಗು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

    ಮುಂದುವರೆದು ಮಾತನಾಡಿದ ಅವರು “ಸಂಘಟನೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದ ಈ ಸಭೆಯು ಪ್ರತಿ ವರ್ಷ ನಡೆಯುತ್ತದೆ. ಇದರಲ್ಲಿ ವಿಶೇಷವಾಗಿ ವಿಶ್ವ ಹಿಂದೂ ಪರಿಷತ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಜನತಾ ಪಾರ್ಟಿ, ವಿದ್ಯಾ ಭಾರತಿ ಹೀಗೆ 34 ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸುತ್ತಿದ್ದು, ಮೂರು ದಿನಗಳ ಈ ಸಭೆಯಲ್ಲಿ ಸಂಘದ ಕಾರ್ಯಸ್ಥಿತಿಯ ಕುರಿತು, ಸಂಘದ ಮೂಲ ಶಾಖಾ ಕಾರ್ಯ, ಅದರ ವಿಸ್ತಾರದ ಕುರಿತು ಚರ್ಚೆ ನಡೆಯಲಿದೆ. ಪ್ರತಿವರ್ಷವೂ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರ ಕಾರ್ಯದ ಸಮೀಕ್ಷೆಯೂ ನಡೆಯಲಿದೆ‌” ಎಂದರು.

    “ಈ 2025ಕ್ಕೆ ಸಂಘಕ್ಕೆ 100 ವರ್ಷಗಳು ಪೂರ್ಣಗೊಳ್ಳಲಿದ್ದು, ಇದರ ನಿಮಿತ್ತವಾಗಿ ಶತಾಬ್ದಿ ಕಾರ್ಯ ವಿಸ್ತಾರ ಯೋಜನೆ ಈಗಾಗಲೇ ಎರಡು ವರ್ಷಗಳಿಂದ ಪ್ರಾರಂಭಗೊಂಡಿದ್ದು ಇದರ ಕುರಿತಾಗಿ ಚರ್ಚೆ ಮತ್ತು ಸಮೀಕ್ಷೆಗಳು ನಡೆಯಲಿದೆ. ಅದರಲ್ಲೂ ಈ ಕಾರ್ಯದ ವಿಸ್ತರಣೆಯ ಸಲುವಾಗಿ ನಡೆದ ವಿಶೇಷ ಪ್ರಯೋಗಗಳು, ವಿವಿಧ ಕಾರ್ಯವಿಧಾನಗಳು, ವಿವಿಧ ಪ್ರಾಂತಗಳಲ್ಲಿ ನಡೆಯುತ್ತಿರುವ ವಿಶೇಷ ಪ್ರಯತ್ನಗಳ ಕುರಿತಾಗಿ ಮತ್ತು ಯೋಜನೆಯ ಮುಂದಿನ ಹಂತದ ತಯಾರಿಯ ಕುರಿತಾಗಿ ಚರ್ಚೆ ನಡೆಯಲಿದೆ” ಎಂದರು.
    “ಪ್ರತಿ ವರ್ಷ ಸಂಘದ ಪ್ರಶಿಕ್ಷಣ ನಡೆಯುತ್ತದೆ. ಪ್ರಾಥಮಿಕ ವರ್ಗ, ಪ್ರಥಮ ವರ್ಷ, ದ್ವಿತೀಯ ವರ್ಷ ಮತ್ತು ತೃತೀಯ ವರ್ಷ ಅದರ ಕುರಿತಾಗಿಯೂ ಯೋಜನೆಗಳು ಇಲ್ಲಿ ನಡೆಯಲಿದೆ. ಅಲ್ಲದೆ ನಾಳೆ 11ರಂದು ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದ್ದು ಕೆಲವು ನಿರ್ಣಯಗಳನ್ನು ಶಿಫಾರಸ್ಸು ಮಾಡಲಾಗುತ್ತದೆ, ಅದನ್ನು ಪ್ರತಿನಿಧಿ ಸಭಾದಲ್ಲಿ ಚರ್ಚೆಗೊಳಪಡಿಸಿ ಕಾರ್ಯರೂಪಕ್ಕೆ ತರಲು ಅನುಮೋದನೆ ನೀಡಲಾಗುತ್ತದೆ” ಎಂದರು.

    “ವಾಸ್ತವವಾಗಿ ಕಾರ್ಯಕರ್ತರು ಒಟ್ಟಿಗೆ ಸೇರಿದಾಗ ವರ್ತಮಾನ ಪರಿಸ್ಥಿತಿ ಕುರಿತು ಅವರ ಅನುಭವಗಳನ್ನು ಅವರು ಸಭೆಯ ಮುಂದಿಡುತ್ತಾರೆ ಅದರ ಕುರಿತೂ ಚರ್ಚೆ ನಡೆಸಲಾಗುತ್ತದೆ. ಯಾವೆಲ್ಲ ವಿಷಯಗಳ ಕುರಿತು ಹೆಚ್ಚಿನ ಕಾರ್ಯದ ಅಗತ್ಯವಿದೆಯೋ ಅದರ ಬಗ್ಗೆಯೂ ವಿಚಾರ ವಿಮರ್ಶೆ ನಡೆಯುತ್ತದೆ. ಈ ಬಾರಿ ಶಾಖಾ ಚಟುವಟಿಕೆಗಳ ಕುರಿತು ವಿಶೇಷ ಚರ್ಚೆಗೆ ಆಗ್ರಹವಿದೆ. ಶಾಖೆಯು ಸಂಘದ ಸಾಮಾಜಿಕ ಕಾರ್ಯಚಟುವಟಿಕೆಗಳ ಕೇಂದ್ರವಾಗಿದ್ದು ಅಲ್ಲಿನ ಸ್ವಯಂಸೇವಕರೂ ತಮ್ಮ ಸಮಾಜದ ಸಾಮಾಜಿಕ ಅಧ್ಯಯನ ನಡೆಸುತ್ತಾರೆ. ಈ ಹಿಂದೆ ನಡೆದ ಕೆಲವು ಅಧ್ಯಯನಗಳ ಆಧಾರದ ಮೇಲೆ ಅನೇಕ ಕೆಲಸಗಳು ನಡೆಯುತ್ತಿದ್ದು ಅದರಲ್ಲಿಯೂ ವಿಶೇಷವಾಗಿ ಸ್ವಾಧಾರಿತ, ಸಾಮರಸ್ಯ, ಸ್ವಾವಲಂಬಿ, ಸೇವೆ ಹೀಗೆ ಅನೇಕ ವಿಷಯಗಳ ಕುರಿತು ಅವರ ಕ್ಷೇತ್ರಗಳ ಹೊಸ ಉಪಕ್ರಮಗಳ ಬಗೆಗೆ ಚರ್ಚೆ ನಡೆಯಲಿದೆ” ಎಂದರು.

    300x250 AD

    ಈ ಬಾರಿ ವಿಶೇಷವಾಗಿ ಕೆಲವು ವಿಶೇಷ ವಕ್ತಾರರು ಆಗಮಿಸಲಿದ್ದಾರೆ. ಮಹರ್ಷಿ ದಯಾನಂದರ 200ನೆಯ ವರ್ಷದ ಜಯಂತೋತ್ಸವವಿದ್ದು ಅದರ ಸ್ಮರಣಾರ್ಥ 12 ಫೆಬ್ರವರಿಯಂದು ವಿಶೇಷ ಸಭೆ ನಡೆಯುಲಿದ್ದು ಇದರ ನಿಮಿತ್ತ ಹಲವು ಕಾರ್ಯಚಟುವಟಿಕೆಗಳನ್ನೂ ಸಂಘ ಕೈಗೆತ್ತಿಕೊಳ್ಳಲಿದೆ. ಜೊತೆಗೆ ಭಗವಾನ್ ಮಹಾವೀರ ನಿರ್ವಾಣ ಮಹೋತ್ಸವ ವರ್ಷವೂ ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿಯೂ ಈ ಮಹೋತ್ಸವದ ಕುರಿತು ವಿಶೇಷ ಕಾರ್ಯಗಳನ್ನು ವರ್ಷವಿಡೀ ಹಮ್ಮಿಕೊಳ್ಳುವ ಸಲುವಾಗಿ ಚರ್ಚೆ ನಡೆಯಲಿದೆ” ಎಂದರು.

    “ಹೀಗೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಯಲಿದ್ದು ವಿಶೇಷವಾಗಿ ನಾಗರೀಕ ಕರ್ತವ್ಯದ ದೃಷ್ಟಿಯಿಂದ ಸ್ವಯಂಸೇವಕರು ಹಾಗು ವಿವಿಧ ಕ್ಷೇತ್ರದ ಕಾರ್ಯಕರ್ತರು ಅನೇಕ ಕೆಲಸಗಳನ್ನು ಜೋಡಿಸಿಕೊಂಡಿದ್ದು ಅದರಲ್ಲಿಯೂ ಪರಿಸರದ ಕುರಿತಾಗಿ, ಧಾರ್ಮಿಕ – ಆಧ್ಯಾತ್ಮಿಕ ಕಾರ್ಯಗಳ ಕುರಿತಾಗಿ ಚರ್ಚೆಗಳು ಹಾಗು ಕಾರ್ಯಯೋಜನೆಗಳನ್ನು ಮಾಡಲಾಗುತ್ತದೆ” ಎಂದರು.

    ಅಖಿಲ ಭಾರತೀಯ ಪ್ರತಿನಿಧಿ ಸಭಾದ ಅಂತಿಮ ದಿನವಾದ 14ರಂದು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಭೆಯಲ್ಲಿ ನಡೆದ ಚರ್ಚೆಗಳ ಕುರಿತಾಗಿ,ಕಾರ್ಯಯೋಜನೆಗಳ ವಿಚಾರವಾಗಿ ವಿಸ್ತಾರವಾಗಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top