• Slide
    Slide
    Slide
    previous arrow
    next arrow
  • ಮಹಿಳೆ ಸಶಕ್ತರಾದಾಗ ಸಮಾಜದ ಉನ್ನತಿ: ಬಿಇಓ ಮಂಗಳಲಕ್ಷ್ಮಿ

    300x250 AD

    ಅಂಕೋಲಾ: ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಸಮಾಜವನ್ನು ಬದಲಾಯಿಸಬಲ್ಲ ಸರ್ವಶಕ್ತಿಯನ್ನು ಮಹಿಳೆ ಹೊಂದಿದ್ದಾಳೆ. ಸ್ವಾವಲಂಬಿ ಜೀವನ ನಡೆಸುತ್ತಿರುವ ವಿಶೆಷ ಚೇತನ ಮಹಿಳೆ ರಾಜೇಶ್ವರಿ ಕುಸ್ಲಪ್ಪ ನಾಯ್ಕರ ಸಾಧನೆ ಸರ್ವರಿಗೂ ಮಾದರಿಯಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ನುಡಿದರು.

    ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘಟನೆ ಅಂಕೋಲಾದಿoದ ಹಮ್ಮಿಕೊಳ್ಳಲಾದ ವಿಶೇಷ ಚೇತನ ಸ್ವಾವಲಂಬಿ ಮಹಿಳೆ ರಾಜೇಶ್ವರಿ ನಾಯ್ಕ ಅಂಬಾರಕೊಡ್ಲರವರನ್ನು ಸನ್ಮಾನಿಸಿ ಮಾತನಾಡುತ್ತ, ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಸರಕಾರಗಳು ಹತ್ತು ಹಲವು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಅವುಗಳ ಸದುಪಯೋಗವನ್ನು ಪಡೆದು ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವುದರ ಮೂಲಕ ಶಕ್ತಿಶಾಲಿ ಸಮಾಜದ ನಿರ್ಮಾಣದ ರೂವಾರಿಗಳಾಗಬೇಕೆಂದರು.
    ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಮಾತನಾಡಿ, ಭಾರತ ಸಂವಿಧಾನದಲ್ಲಿ ಮಹಿಳೆಗೆ ಎಲ್ಲ ರೀತಿಯ ಸಮಾನ ಹಕ್ಕುಗಳನ್ನು ನೀಡಿದೆ. ಅದರ ಸದ್ಬಳಕೆಯಿಂದ ಮಹಿಳೆ ಅಬಲೆಯಲ್ಲ. ಸಬಲೆ ಎಂಬ ಸಂದೇಶ ಜಗತ್ತಿಗೆ ಪ್ರದರ್ಶನವಾಗಬೇಕು. ನಮ್ಮ ಸಂಸ್ಕೃತಿ-ಸoಸ್ಕಾರಗಳನ್ನು ಮೈಗೂಡಿಸಿಕೊಂಡು ಸಶಕ್ತ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಶಕ್ತರಾದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಮಹಿಳೆ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ವಿಕಲಚೇತನ ಸ್ವಾವಲಂಬಿ ಮಹಿಳೆ ರಾಜಶ್ರೀ ನಾಯ್ಕ ಸಾಕ್ಷೀಕರಿಸಿದ್ದಾರೆ. ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಮೆಟ್ಟಿ ನಿಂತು ಸ್ವ ಉದ್ಯೋಗ ಮಾಡುವುದರ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವ ರಾಜೇಶ್ವರಿ ನಾಯ್ಕ ಸಾಮಾನ್ಯ ಜನರಿಗೆ ಮಾದರಿಯಾಗಿದ್ದಾರೆ. ಅವರ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಬೆರಗುಗೊಳಿಸುವಂಥದ್ದು ಎಂದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್ವರಿ ಕುಸ್ಲಪ್ಪ ನಾಯ್ಕ ನನ್ನ ಕುಟುಂಬ ನನಗೆ ಬೆಂಬಲವಾಗಿ ನಿಂತಿದೆ. ವಿಶೇಷ ಚೇತನ ಮಹಿಳೆಯಾದ ನನ್ನನ್ನು ನನ್ನ ಕುಟುಂಬದ ಪ್ರತಿಯೊಬ್ಬರು ಪ್ರೋತ್ಸಾಹಿಸಿ ನನ್ನ ಕೆಲಸಕ್ಕೆ ಪ್ರೇರಣೆ ನೀಡುವುದರ ಮೂಲಕ ನಾನು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ನನ್ನ ಸಾಧನೆಯ ದಾರಿಯಲ್ಲಿ ಅಂಬಾರಕೊಡ್ಲದ ಬಾಬು ಗೌಡ ಮಾಸ್ತರರ ಸಹಕಾರವನ್ನು ಮರೆಯಲಾರದ್ದು ಎಂದರು.
    ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಟನೆಯ ತಾಲೂಕು ಅಧ್ಯಕ್ಷೆ ಶೋಭಾ ಎಸ್.ನಾಯಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗವೇಣಿ ಬಿ. ನಾಯಕ ವಂದಿಸಿದರು. ಕೋಶಾಧ್ಯಕ್ಷೆ ಸುಜಾತಾ ರೇವಣಕರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿಪುಲೆ ಸಂಘಟನೆಯ ಸದಸ್ಯರಾದ ಬ್ರಿಜೀತಾ ಕೋರಿಯಾ, ರೇಶ್ಮಾ ನಾಯ್ಕ, ಶ್ಯಾಮಲಾ ಎಸ್.ನಾಯ್ಕ, ಜ್ಯೋತಿ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ, ಸಿಆರ್‌ಪಿಗಳಾದ ಕೆ.ಎಂ.ಗೌಡ, ವಿನಾಯಕ ನಾಯಕ, ರಾಜೇಶ್ವರಿ ನಾಯ್ಕ ಕುಟುಂಬದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top